ದೇಶ

ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಮನೀಶ್ ಸಿಸೋಡಿಯಾ ಬಂಧಿಸಿದ ಇಡಿ

Lingaraj Badiger

ನವದೆಹಲಿ: ದೆಹಲಿ ಅಬಕಾರಿ ನೀತಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಆಮ್ ಆದ್ಮಿ ಪಕ್ಷದ ನಾಯಕ ಮತ್ತು ದೆಹಲಿ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಜಾರಿ ನಿರ್ದೇಶನಾಲಯ(ಇಡಿ) ಗುರುವಾರ ಬಂಧಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ತಿಹಾರ್ ಜೈಲಿನಲ್ಲಿ ಇಂದು ಸತತ 8 ಗಂಟೆಗಳ ಕಾಲ ಎರಡನೇ ಸುತ್ತಿನ ವಿಚಾರಣೆ ನಡೆಸಿದ ನಂತರ 51 ವರ್ಷದ ಸಿಸೋಡಿಯಾ ಅವರನ್ನು ಮನಿ ಲಾಂಡರಿಂಗ್ ತಡೆ ಕಾಯ್ದೆಯಡಿ ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುವ ಸಿಸೋಡಿಯಾ ಅವರು ತಮ್ಮ ಇಡಿ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸುತ್ತಿಲ್ಲ ಮತ್ತು "ತನಿಖೆಗೆ ಸಹಕರಿಸುತ್ತಿಲ್ಲ" ಎಂದು ಕೇಂದ್ರ ತನಿಖಾ ಸಂಸ್ಥೆ ಆರೋಪಿಸಿದೆ.

2021-22ರ ದೆಹಲಿ ಮದ್ಯ ಅಥವಾ ಅಬಕಾರಿ ನೀತಿಯ ರಚನೆ ಮತ್ತು ಅನುಷ್ಠಾನದಲ್ಲಿನ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಫೆಬ್ರವರಿ 26 ರಂದು ಸಿಸೋಡಿಯಾ ಅವರನ್ನು ಸಿಬಿಐ ಬಂಧಿಸಿದ ನಂತರ ಈಗ ಇಡಿ ವಶಕ್ಕೆ ಪಡೆದಿದೆ. 

ಜಾರಿ ನಿರ್ದೇಶನಾಲಯ ಮಾರ್ಚ್ 7 ರಂದು ಸಿಸೋಡಿಯಾ ಅವರನ್ನು ಮೊದಲ ಸುತ್ತಿನ ವಿಚಾರಣೆಗೆ ಒಳಪಡಿಸಿತ್ತು.

SCROLL FOR NEXT