ದೇಶ

ರಾಜಸ್ಥಾನ: ಮಾರ್ಫ್ ಮಾಡಿದ ಫೋಟೋ ಇಟ್ಕೊಂಡು ಮಹಿಳಾ ನ್ಯಾಯಾಧೀಶರಿಗೇ ಬ್ಲಾಕ್ ಮೇಲ್, 20 ಲಕ್ಷಕ್ಕೆ ಬೇಡಿಕೆ!

Lingaraj Badiger

ಜೈಪುರ: ರಾಜಸ್ಥಾನದಲ್ಲಿ ವ್ಯಕ್ತಿಯೊಬ್ಬ, ಮಾರ್ಫ್ ಮಾಡಿದ ಫೋಟೋಗಳನ್ನು ಇಟ್ಟುಕೊಂಡು ಮಹಿಳಾ ನ್ಯಾಯಾಧೀಶರಿಗೇ ಬ್ಲಾಕ್‌ಮೇಲ್ ಮಾಡಿದ್ದು, 20 ಲಕ್ಷ ರೂಪಾಯಿ ನೀಡಿ. ಇಲ್ಲದಿದ್ದರೆ ಆ ಚಿತ್ರಗಳನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ವ್ಯಕ್ತಿಯನ್ನು ಗುರುತಿಸಲಾಗಿದ್ದು, ಆತನನ್ನು ಹಿಡಿಯಲು ಪ್ರಯತ್ನಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

ಮಹಿಳಾ ನ್ಯಾಯಾಧೀಶರ ಫೋಟೋಗಳನ್ನು ಅವರ ಸಾಮಾಜಿಕ ಮಾಧ್ಯಮ ಖಾತೆಯಿಂದ ಡೌನ್‌ಲೋಡ್ ಮಾಡಿ, ಎಡಿಟ್ ಮಾಡಿ ಅವುಗಳನ್ನು ನ್ಯಾಯಾಲಯದಲ್ಲಿರುವ ಅವರ ಕೋಣೆಗೆ ಮತ್ತು ಅವರ ಮನೆಗೆ ಆರೋಪಿ ಕಳುಹಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 

ಈ ಸಂಬಂಧ ಫೆಬ್ರವರಿ 28ರಂದು ಪ್ರಕರಣ ದಾಖಲಾಗಿದ್ದು, ಇದುವರೆಗೂ ಯಾರನ್ನೂ ಬಂಧಿಸಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಎಫ್‌ಐಆರ್‌ನಲ್ಲಿ, ಫೆಬ್ರವರಿ 7 ರಂದು, ತಮ್ಮ ಸ್ಟೆನೋಗ್ರಾಫರ್ ವ್ಯಕ್ತಿಯೊಬ್ಬರು ನೀಡಿದ ಪಾರ್ಸೆಲ್ ಅನ್ನು ತಮಗೆ ತಂದುಕೊಟ್ಟರು ಎಂದು ನ್ಯಾಯಾಧೀಶರು ದೂರಿದ್ದಾರೆ.

ಪಾರ್ಸೆಲ್‌ನಲ್ಲಿ ಕೆಲವು ಸಿಹಿತಿಂಡಿಗಳು, ನ್ಯಾಯಾಧೀಶರ ಮಾರ್ಫ್ ಮಾಡಿದ ಅಶ್ಲೀಲ ಫೋಟೋಗಳು ಮತ್ತು ಪತ್ರವನ್ನು ಹೊಂದಿದ್ದು, ಅದರಲ್ಲಿ 20 ಲಕ್ಷ ರೂಪಾಯಿ ನೀಡದಿದ್ದರೆ ಫೋಟೋಗಳನ್ನು ಸಾರ್ವಜನಿಕಗೊಳಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಎಫ್‌ಐಆರ್ ತಿಳಿಸಿದೆ.

"20 ಲಕ್ಷ ರೂ.ಗಳೊಂದಿಗೆ ಸಿದ್ಧರಾಗಿರಿ, ಇಲ್ಲದಿದ್ದರೆ ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಹಾಳುಮಾಡುತ್ತೇನೆ. ಸಮಯ ಮತ್ತು ಸ್ಥಳವನ್ನು ಶೀಘ್ರದಲ್ಲೇ ತಿಳಿಸಲಾಗುವುದು" ಎಂದು ಪತ್ರದಲ್ಲಿ ಬರೆಯಲಾಗಿದೆ.

SCROLL FOR NEXT