ದೇಶ

ಗ್ಯಾಂಗ್ ಸ್ಟರ್ ಅತೀಕ್ ಅಹ್ಮದ್ ಸಹೋದರನ ಭೇಟಿಗೆ ಅವಕಾಶ: ಜೈಲರ್ ಸೇರಿ 6 ಸಿಬ್ಬಂದಿ ಅಮಾನತು

Lingaraj Badiger

ಬರೇಲಿ: ಗ್ಯಾಂಗ್ ಸ್ಟರ್ - ರಾಜಕಾರಣಿ ಅತೀಕ್ ಅಹ್ಮದ್ ಸಹೋದರ ಅಶ್ರಫ್ ಅವರಿಗೆ ಜೈಲಿನಲ್ಲಿ ಅಕ್ರಮವಾಗಿ ಜನರ ಭೇಟಿಗೆ ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಜೈಲರ್ ಮತ್ತು ಉಪ ಜೈಲರ್ ಸೇರಿದಂತೆ ಬರೇಲಿ ಕೇಂದ್ರ ಕಾರಾಗೃಹದ ಆರು ಸಿಬ್ಬಂದಿಯನ್ನು ಸೋಮವಾರ ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡಿಐಜಿ(ಜೈಲು) ಆರ್ ಎನ್ ಪಾಂಡೆ ಅವರ ತನಿಖಾ ವರದಿಯ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಡಿಜಿ(ಜೈಲು) ಆನಂದ್ ಕುಮಾರ್ ಅವರು ಹೇಳಿದ್ದಾರೆ.

ಜೈಲರ್ ರಾಜೀವ್ ಕುಮಾರ್ ಮಿಶ್ರಾ, ಉಪ ಜೈಲರ್ ದುರ್ಗೇಶ್ ಪ್ರತಾಪ್ ಸಿಂಗ್, ಮುಖ್ಯ ಜೈಲು ವಾರ್ಡರ್ ಬ್ರಿಜ್ವೀರ್ ಸಿಂಗ್ ಮತ್ತು ಜೈಲು ವಾರ್ಡರ್ ಗಳಾದ ಮನೋಜ್ ಗೌರ್, ಡ್ಯಾನಿಶ್ ಮೆಹಂದಿ ಮತ್ತು ದಲ್ಪತ್ ಸಿಂಗ್ ಅವರನ್ನು ಅಮಾನತುಗೊಳಿಸಲಾಗಿದೆ.

ಪ್ರಸ್ತುತ ಗುಜರಾತ್ ಜೈಲಿನಲ್ಲಿರುವ ಅಶ್ರಫ್ ಅವರ ಸಹೋದರ ಅತೀಕ್ ಅಹ್ಮದ್ 2005 ರಲ್ಲಿ ಆಗಿನ ಬಿಎಸ್ಪಿ ಶಾಸಕ ರಾಜು ಪಾಲ್ ಅವರ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದಾರೆ.

ರಾಜು ಪಾಲ್ ಹತ್ಯೆ ಪ್ರಕರಣದ ಪ್ರಮುಖ ಸಾಕ್ಷಿ ಉಮೇಶ್ ಪಾಲ್ ಹತ್ಯೆಗೆ ಸಂಬಂಧಿಸಿದಂತೆ ಅತೀಕ್ ಮತ್ತು ಅಶ್ರಫ್ ವಿರುದ್ಧ ಇತ್ತೀಚೆಗೆ ಪ್ರಕರಣ ದಾಖಲಿಸಲಾಗಿತ್ತು.

ರಾಜುಪಾಲ್ ಹತ್ಯೆ ಪ್ರಕರಣದಲ್ಲಿ ಮಾಜಿ ಶಾಸಕ ಅಶ್ರಫ್ ಕೂಡ ಆರೋಪಿಯಾಗಿದ್ದಾರೆ.

SCROLL FOR NEXT