ದೇಶ

ಬಿಆರ್‌ಎಸ್ ಶಾಸಕರ ಖರೀದಿ ಪ್ರಕರಣ: ಸಿಬಿಐ ತನಿಖೆಗೆ ಸುಪ್ರೀಂ ಕೋರ್ಟ್‌ ತಡೆ

Lingaraj Badiger

ನವದೆಹಲಿ: ಬಿಜೆಪಿಯಿಂದ ತೆಲಂಗಾಣದ ಆಡಳಿತರೂಢ ಬಿಆರ್‌ಎಸ್‌(ಹಿಂದಿನ ಟಿಆರ್ ಎಸ್) ಶಾಸಕರ ಖರೀದಿ ಪ್ರಕರಣದ ತನಿಖೆಯನ್ನು ಸ್ಥಗಿತಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ ಸೋಮವಾರ ಸಿಬಿಐಗೆ ಆದೇಶಿಸಿದೆ.

ಪ್ರಕರಣವನ್ನು ಸಿಬಿಐಗೆ ವಹಿಸಿದ ಹೈಕೋರ್ಟ್ ಆದೇಶದ ವಿರುದ್ಧ ತೆಲಂಗಾಣ ಪೊಲೀಸರು ಸಲ್ಲಿಸಿದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಎಂ.ಎಂ. ಸುಂದರೇಶ್ ಅವರು, ಸಿಬಿಐ ಈ ಪ್ರಕರಣದ ತನಿಖೆ ಮುಂದುವರಿಸಬಾರದು ಎಂದು ಹೇಳಿ, ವಿಚಾರಣೆಯನ್ನು ಜುಲೈಗೆ ಮುಂದೂಡಿದ್ದಾರೆ.

ತೆಲಂಗಾಣ ಪೊಲೀಸರ ಪರ ವಾದ ಮಂಡಿಸಿದ ಹಿರಿಯ ವಕೀಲ ದುಶ್ಯಂತ್ ದವೆ, ತನಿಖೆಯನ್ನು ಸಿಬಿಐಗೆ ವಹಿಸಿರುವುದನ್ನು ತೀವ್ರವಾಗಿ ವಿರೋಧಿಸಿದರು. ಪ್ರಕರಣದ ಸಾಮಾಗ್ರಿಗಳನ್ನು ಇದುವರೆಗೆ ಕೇಂದ್ರ ತನಿಖಾ ಸಂಸ್ಥೆಗೆ ಹಸ್ತಾಂತರಿಸಲಾಗಿಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಲಾಯಿತು. ಬಳಿಕ ಪ್ರಕರಣ ನ್ಯಾಯಾಲಯದಲ್ಲಿರುವಾಗ ಸಿಬಿಐ ತನಿಖೆ ಮುಂದುವರಿಸಬಾರದು ಎಂದು ಸ್ಪಷ್ಟವಾಗಿ ಹೇಳುತ್ತಿರುವುದಾಗಿ ಸುಪ್ರೀಂ ಪೀಠ ತಿಳಿಸಿದೆ.

ಕೇಂದ್ರದ ಹಿಡಿತದಲ್ಲಿದೆ ಎನ್ನಲಾದ ಈ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಿದರೆ ಆಗುವ ಪರಿಣಾಮ ಗಂಭೀರವಾಗಲಿದೆ ಎಂದು ದವೆ ಈ ಹಿಂದೆ ವಾದಿಸಿದ್ದರು.

ತೆಲಂಗಾಣ ಹೈಕೋರ್ಟ್‌ನ ವಿಭಾಗೀಯ ಪೀಠವು ಫೆಬ್ರವರಿ 6 ರಂದು ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಿತ್ತು. 

SCROLL FOR NEXT