ಗುವಾಹಟಿ: ಅಸ್ಸಾಂ ನಲ್ಲಿ ನಡೆದ ರಾಜ್ಯ ಸಿನಿಮಾ ಪ್ರಶಸ್ತಿ ಸಮಾರಂಭದಲ್ಲಿ ಉಂಟಾದ ಎಡವಟ್ಟಿನ ಬಗ್ಗೆ ಅಸ್ಸಾಂ ನ ಸಂಸ್ಕೃತಿ ಸಚಿವ ಬಿಮಲ್ ಬೋರಾ ಪ್ರತಿಕ್ರಿಯೆ ನೀಡಿದ್ದಾರೆ.
ಸಿನಿಮಾ ಪ್ರಶಸ್ತಿ ಪ್ರದಾನದ ವೇಳೆ ಹಾಡೊಂದರ ಹಿನ್ನೆಲೆ ಗಾಯಕರಿಗೆ ಪ್ರಶಸ್ತಿಯನ್ನು ನೀಡಬೇಕಿತ್ತು. ಆದರೆ ಆ ಹಾಡಿಗೆ ಸಂಬಂಧವೇ ಪಡದ ಕಲಾವಿದೆಯೊಬ್ಬರಿಗೆ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಯನ್ನು ನೀಡಲಾಗಿರುವುದು ಸಮಾರಂಭದಲ್ಲಿ ನಡೆದ ಎಡವಟ್ಟಾಗಿದೆ.
ಸಚಿವರು ಈ ಬಗ್ಗೆ ಸಮರ್ಥನೆ ನೀಡಿದ್ದು, ಸರಿಯಾದ ಗಾಯಕರಿಗೇ ಪ್ರಶಸ್ತಿ ನೀಡಲಾಗಿದೆ. ಆದರೆ ಪ್ರಶಸ್ತಿ ಪತ್ರದಲ್ಲಿ ಹಾಡನ್ನು ತಪ್ಪಾಗಿ ಉಲ್ಲೇಖಿಸಲಾಗಿದೆ, ಅದೂ ಸಹ ಮಾನವ ಸಹಜ ದೋಷ ಎಂದು ಹೇಳಿದ್ದಾರೆ.
ಅಸ್ಸಾಮ್ ನ 8ನೇ ರಾಜ್ಯ ಸಿನಿಮಾ ಪ್ರಶಸ್ತಿಯಲ್ಲಿ ಹಿನ್ನೆಲೆ ಗಾಯನ(ಮಹಿಳೆ) ವಿಭಾಗದಲ್ಲಿ ನಹಿದ್ ಅಫ್ರಿನ್ ಅವರಿಗೆ ನಿಜನೋರ್ ಗಾನ್ ಸಿನಿಮಾಗಾಗಿ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ ಪಡೆದಿದ್ದರು.
ಈ ಸಿನಿಮಾದಲ್ಲಿ ಆಕೆ ಹಾಡಿದ್ದು ಒಂದೇ ಹಾಡು. ಸನ್ಮಾನ ಅಥವಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪರದೆಯ ಮೇಲೆ ಆಕೆ ಹಾಡದ ಹಾಡಿಗೆ ಪ್ರಶಸ್ತಿಯನ್ನು ಪ್ರಕಟಿಸಲಾಗಿದ್ದು ವಿವಾದಕ್ಕೆ ಗುರಿಯಾಗಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಚಿವರು, ಆ ಪ್ರಶಸ್ತಿ ನಹೀದ್ ಅಫ್ರಿನ್ ಅವರಿಗೇ ಸಲ್ಲಬೇಕಿತ್ತು. ಇದರಲ್ಲಿ ಯಾವುದೇ ಗೊಂದಲಗಳಿಲ್ಲ. ಪರದೆಯ ಮೇಲೆ ಪ್ರಕಟವಾದ ಹಾಡು ತಪ್ಪಾಗಿತ್ತು ಇದು ಮಾನವ ದೋಷ ಎಂದು ಹೇಳಿದ್ದಾರೆ.