ದೇಶ

ಉದ್ಯೋಗಕ್ಕಾಗಿ ಭೂ ಹಗರಣ: ಲಾಲು ಪ್ರಸಾದ್, ರಾಬ್ರಿ ಮತ್ತು ಪುತ್ರಿ ಮಿಸಾ ಭಾರತಿಗೆ ದೆಹಲಿ ನ್ಯಾಯಾಲಯ ಜಾಮೀನು ಮಂಜೂರು

Sumana Upadhyaya

ನವದೆಹಲಿ: ಉದ್ಯೋಗಕ್ಕಾಗಿ ಭೂ ಹಗರಣಕ್ಕೆ ಸಂಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಯಾದವ್, ಅವರ ಪತ್ನಿ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಮತ್ತು ಅವರ ಪುತ್ರಿ ಮಿಸಾ ಭಾರ್ತಿ ಅವರಿಗೆ ದೆಹಲಿ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ.

ಇತ್ತೀಚೆಗಷ್ಟೇ ಕಿಡ್ನಿ ಕಸಿಗೆ ಒಳಗಾಗಿ ಗಾಲಿಕುರ್ಚಿಯಲ್ಲಿ ಓಡಾಡುತ್ತಿರುವ 74ರ ಹರೆಯದ ಲಾಲು ಪ್ರಸಾದ್ ಅವರು ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ರೂಸ್ ಅವೆನ್ಯೂ ಕೋರ್ಟ್‌ಗೆ ತಲುಪಿದರಾದರೂ ವಿಚಾರಣೆ ವಿಳಂಬವಾಯಿತು. ಬೆಳಗ್ಗೆ 11 ಗಂಟೆ ಸುಮಾರಿಗೆ ವಿಶೇಷ ನ್ಯಾಯಾಧೀಶರಾದ ಗೀತಾಂಜಲಿ ಗೋಯೆಲ್ ಅವರ ಮುಂದೆ ಕುಟುಂಬದವರು ಹಾಜರಾದರು.

50,000 ರೂಪಾಯಿಗಳ ವೈಯಕ್ತಿಕ ಬಾಂಡ್ ಮತ್ತು ಒಬ್ಬರ ಶ್ಯೂರಿಟಿ ಮೇಲೆ ಜಾಮೀನು ನೀಡಲಾಗಿದೆ.

ಲಾಲು ಪ್ರಸಾದ್ ಅವರು 2004 ಮತ್ತು 2009 ರ ನಡುವೆ ರೈಲ್ವೆ ಸಚಿವರಾಗಿದ್ದಾಗ ಅವರ ಕುಟುಂಬಕ್ಕೆ ಉಡುಗೊರೆಯಾಗಿ ನೀಡಿದ ಅಥವಾ ಮಾರಾಟ ಮಾಡಿದ ಜಮೀನುಗಳಿಗೆ ಪ್ರತಿಯಾಗಿ ರೈಲ್ವೇಯಲ್ಲಿ ನೇಮಕಾತಿ ಮಾಡಲಾಗಿದೆ ಎಂಬ ಆರೋಪದ ಪ್ರಕರಣಕ್ಕೆ ಸಂಬಂಧಿಸಿದೆ.

ಸಿಬಿಐ ತನ್ನ ಚಾರ್ಜ್ ಶೀಟ್‌ನಲ್ಲಿ, ರೈಲ್ವೆಯಲ್ಲಿ ಅನಿಯಮಿತ ನೇಮಕಾತಿಗಳನ್ನು ಮಾಡಲಾಗಿದೆ. ನೇಮಕಾತಿಗಾಗಿ ಭಾರತೀಯ ರೈಲ್ವೆಯ ನಿಯಮಗಳು ಮತ್ತು ಕಾರ್ಯವಿಧಾನಗಳನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿದೆ. ರೈಲ್ವೆಯಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಅಭ್ಯರ್ಥಿಗಳು ನೇರವಾಗಿ ಅಥವಾ ಅವರ ಹತ್ತಿರದ ಸಂಬಂಧಿಗಳು ಮತ್ತು ಕುಟುಂಬದ ಸದಸ್ಯರ ಮೂಲಕ ಲಾಲು ಪ್ರಸಾದ್ ಅವರ ಕುಟುಂಬ ಸದಸ್ಯರಿಗೆ ಚಾಲ್ತಿಯಲ್ಲಿರುವ ಮಾರುಕಟ್ಟೆ ದರದ ಐದನೇ ಒಂದು ಭಾಗದವರೆಗೆ ಹೆಚ್ಚಿನ ರಿಯಾಯಿತಿ ದರದಲ್ಲಿ ಭೂಮಿಯನ್ನು ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿದೆ.

ಫೆಬ್ರವರಿ 27 ರಂದು ವಿಶೇಷ ನ್ಯಾಯಾಧೀಶ ಗೋಯೆಲ್ ಅವರು ಮಿಸಾ ಭಾರತಿ ಸೇರಿದಂತೆ ಆರೋಪಿಗಳಿಗೆ ಸಮನ್ಸ್ ಜಾರಿಗೊಳಿಸಿ ಮಾರ್ಚ್ 15 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿದರು.

SCROLL FOR NEXT