ದೇಶ

ಶಾಂಘೈ ಸಹಕಾರ ಸಂಸ್ಥೆಯ ಮೊದಲ ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ರಾಜಧಾನಿಯಾಗಿ 'ಕಾಶಿ' ಘೋಷಣೆ

Lingaraj Badiger

ನವದೆಹಲಿ: 'ಕಾಶಿ'(ವಾರಣಾಸಿ)ಯನ್ನು ಶಾಂಘೈ ಸಹಕಾರ ಸಂಸ್ಥೆಯ(SCO) ಮೊದಲ ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ರಾಜಧಾನಿ ಎಂದು ಘೋಷಿಸಲಾಗಿದೆ.

ಶುಕ್ರವಾರ ವಾರಾಣಸಿಯಲ್ಲಿ ನಡೆದ ಪ್ರವಾಸೋದ್ಯಮ ಆಡಳಿತಗಳ ಎಸ್‌ಸಿಒ ಮುಖ್ಯಸ್ಥರ ಸಭೆಯಲ್ಲಿ ಈ ಘೋಷಣೆ ಮಾಡಲಾಗಿದೆ.

“ಈ ಮನ್ನಣೆಯು ಜಾಗತಿಕ ಪ್ರವಾಸಿ ನಕ್ಷೆಯಲ್ಲಿ ಕಾಶಿಗೆ ಹೆಚ್ಚಿನ ಪ್ರಾಮುಖ್ಯತೆ ತರುತ್ತದೆ. ಭಾರತೀಯ ನಾಗರಿಕತೆಯ ತೊಟ್ಟಿಲು ಆಗಿರುವ ಕಾಶಿಯ ಆಧ್ಯಾತ್ಮಿಕ, ಧಾರ್ಮಿಕ ಮತ್ತು ಕಲಿಕೆಯನ್ನು ಎತ್ತಿ ತೋರಿಸುವ ಮೂಲಕ ಹೆಚ್ಚಿನ ಗಮನ ಸೆಳೆಯುತ್ತದೆ ಎಂದು ಪ್ರವಾಸೋದ್ಯಮ ಸಚಿವಾಲಯ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಸಂದರ್ಭದಲ್ಲಿ, ಜಂಟಿ ಕ್ರಿಯಾ ಯೋಜನೆಯನ್ನು ಸಹ ಅಂತಿಮಗೊಳಿಸಲಾಯಿತು ಮತ್ತು SCO ಪ್ರವಾಸೋದ್ಯಮ ಸಚಿವರಿಂದ ಅನುಮೋದಿಸಲಾಯಿತು.

ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಜಿ ಕಿಶನ್ ರೆಡ್ಡಿ ಅವರು ಎಸ್‌ಸಿಒ ಪ್ರವಾಸೋದ್ಯಮ ಆಡಳಿತಗಳ ಮುಖ್ಯಸ್ಥರ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಸಭೆಯಲ್ಲಿ ಒಪ್ಪಿಕೊಂಡಿರುವ ಜಂಟಿ ಕ್ರಿಯಾ ಯೋಜನೆಯ ಪ್ರಕಾರ, ಸದಸ್ಯ ರಾಷ್ಟ್ರಗಳು ಎಸ್‌ಸಿಒ ಪ್ರವಾಸೋದ್ಯಮ ಪ್ರದರ್ಶನ, ಎಸ್‌ಸಿಒ ಆಹಾರ ಉತ್ಸವ, ವೆಬಿನಾರ್ ಮತ್ತು ಪ್ರವಾಸೋದ್ಯಮದ ಕುರಿತು ವಿಚಾರ ಸಂಕಿರಣ, ಸಮ್ಮೇಳನ ಮತ್ತು ಈ ಪ್ರದೇಶದಲ್ಲಿ ಪ್ರವಾಸೋದ್ಯಮದ ಪ್ರಚಾರ ಮತ್ತು ಅಭಿವೃದ್ಧಿ ಕುರಿತು ತಜ್ಞರ ಅಧಿವೇಶನದಂತಹ ವಿವಿಧ ಚಟುವಟಿಕೆಗಳನ್ನು ಕೈಗೊಳ್ಳಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

SCROLL FOR NEXT