ದೇಶ

ಪ್ರಜಾಪ್ರಭುತ್ವದ ಯಶಸ್ಸಿನಿಂದ ಕೆಲವರಿಗೆ ನೋವಾಗಿದ್ದು, ಹೀಗಾಗಿ ಅದರ ಮೇಲೆ ದಾಳಿ ನಡೆಸುತ್ತಿದ್ದಾರೆ: ರಾಹುಲ್ ಗಾಂಧಿ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

Manjula VN

ನವದೆಹಲಿ: ಲಂಡನ್‌ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಇತ್ತೀಚಿನ ಭಾರತದಲ್ಲಿ ಪ್ರಜಾಪ್ರಭುತ್ವ ದಾಳಿಗೆ ತುತ್ತಾಗುತ್ತಿದೆ ಎಂಬ ಹೇಳಿಕೆ ಕುರಿತು ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು,  ಪ್ರಜಾಪ್ರಭುತ್ವದ ಯಶಸ್ಸಿನಿಂದ ಕೆಲವರಿಗೆ ನೋವಾಗಿದೆ. ಹೀಗಾಗಿಯೇ ಅವರು ಅದರ ಮೇಲೆ ದಾಳಿ ನಡೆಸುತ್ತಿದ್ದಾರೆಂದು ವಾಗ್ದಾಳಿ ನಡೆಸಿದ್ದಾರೆ.

ಇಂಡಿಯಾ ಟುಡೇ ನಡೆಸಿದ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ದೇಶ ಅತ್ಯಂತ ಆತ್ಮವಿಶ್ವಾಸದಲ್ಲಿ ಇರುವ ಸಂದರ್ಭದಲ್ಲಿ ಇಡೀ ವಿಶ್ವದ ಬೌದ್ಧಿಕ ಸಮುದಾಯ ಭಾರತದ ಬಗ್ಗೆ ಅಶಾಭಾವನೆ ಹೊಂದಿರುವಾಗ ನಿರಾಶವಾದದ ಬಗ್ಗೆ ಮಾತನಾಡುವ, ದೇಶವನ್ನು ಅತ್ಯಂತ ಕೀಳಾಗಿ ಬಿಂಬಿಸುವ ಮತ್ತು ದೇಶದ ಮನೋಬಲನ್ನು ಕುಗ್ಗಿಸುವಂತಹ ಕೆಲಸಗಳು ನಡೆಯುತ್ತಿವೆ ಎಂದು ಹೆಸರು ಹೇಳದೆಯೇ ರಾಹುಲ್ ಗಾಂಧಿ ವಿರುದ್ಧ ಕುಟುಕಿದರು.

ಏನಾದರೂ ಶುಭ ಕಾರ್ಯಗಳು ನಡೆಯುವಾಗ ಹಣಗೆ ಕಪ್ಪು ತಿಲಕ ಇಡುವ ಸಂಪ್ರದಾಯ ಇದೆ. ಹೀಗಾಗಿಯೇ ಇದೀಗ ದೇಶದಲ್ಲಿ ಹಲವು ಶುಭ ಘಟನೆಗಳು ನಡೆಯುತ್ತಿದೆ ಎನ್ನುವ ಕಾರಣಕ್ಕಾಗಿ ಕೆಲವರು ಕಪ್ಪು ತಿಲಕ ಇಡುವ ಹೊಣೆ ಹೊತ್ತುಕೊಂಡಿದ್ದಾರೆಂದು ವ್ಯಂಗ್ಯವಾಡಿದರು.

ಪ್ರಜಾಪ್ರಭುತ್ವದ ಸಾಮರ್ಥ್ಯವನ್ನು ಭಾರತ ಇಡೀ ವಿಶ್ವಕ್ಕೆ ಸಾಧಿಸಿ ತೋರಿಸಿದೆ. ಆದರೆ, ಈ ಯಶಸ್ಸು, ಕೆಲವರಿಗೆ ನೋವು ತಂದಿದೆ. ಹೀಗಾಗಿಯೇ ಅವರು ಅದರ ಮೇಲೆ ದಾಳಿ ನಡೆಸುತ್ತಿದ್ದಾರೆ. ಆದರೆ, ಇಂತಹ ದಾಳಿಯ ಹೊರತಾಗಿಯೂ ತನ್ನ ಗುರಿಯನ್ನು ಮುಟ್ಟಲು ದೇಶ ಮುಂದಡಿ ಇಡಲಿದೆ ಎಂದು ಹೇಳಿದರು.

ಇದೇ ವೇಳೆ ಇಡೀವಿಶ್ವ, ಇದು ಭಾರತದ ಯುಗ ಎಂದು ಬಣ್ಣಿಸುತ್ತಿದೆ. ಇದಕ್ಕೆ ಕಾರಣವಾಗಿರುವುದು ಭರವಸೆಯ ಬದಲಾವಣೆ ಮತ್ತು ದೇಶದೊಳಗಿನ ಸಾಧನೆ. ಎಳ್ಲಾ ಸರ್ಕಾರಗಳು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಕೆಲಸ ಮಾಡಿ ತಕ್ಕ ಫಲಿತಾಂಶ ಪಡೆದವು. ಆದರೆ, ನಮ್ಮ ಸರ್ಕಾರ ಹೊಸ ಫಲಿತಾಂಶ ಪಡೆಯಲು ವಿಭಿನ್ನ ವೇಗ ಮತ್ತು ಅಗಾಧತೆಯಲ್ಲಿ ಕೆಲಸ ಮಾಡಿತು ಎಂದು ಸರ್ಕಾರದ ಸಾಧನೆಯನ್ನು ಬಣ್ಣಿಸಿದರು.

SCROLL FOR NEXT