ದೇಶ

ರಾಮಸೇತುವನ್ನು ರಾಷ್ಟ್ರೀಯ ಪಾರಂಪರಿಕ ಸ್ಮಾರಕವನ್ನಾಗಿ ಘೋಷಿಸುವಂತೆ ಕೋರಿ ಪಿಐಎಲ್: ಅರ್ಜಿ ವಿಚಾರಣೆಗೆ 'ಸುಪ್ರೀಂ' ಸಮ್ಮತಿ

Ramyashree GN

ನವದೆಹಲಿ: ರಾಮಸೇತುವನ್ನು ರಾಷ್ಟ್ರೀಯ ಪಾರಂಪರಿಕ ಸ್ಮಾರಕವನ್ನಾಗಿ ಘೋಷಿಸುವಂತೆ ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಕೋರಿ ರಾಜ್ಯಸಭಾ ಮಾಜಿ ಶಾಸಕ ಸುಬ್ರಮಣಿಯನ್ ಸ್ವಾಮಿ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ಸೋಮವಾರ ಒಪ್ಪಿಗೆ ನೀಡಿದೆ.

ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ ಮತ್ತು ನ್ಯಾಯಮೂರ್ತಿಗಳಾದ ಪಿಎಸ್ ನರಸಿಂಹ ಮತ್ತು ಜೆಬಿ ಪಾರ್ದಿವಾಲಾ ಅವರಿದ್ದ ಪೀಠವು, ಸರ್ಕಾರವು ಇಲ್ಲಿಯವರೆಗೆ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದ ಬಿಜೆಪಿ ನಾಯಕರ ಮನವಿಗಳನ್ನು ಗಮನಿಸಿತು.

'ಕೇಂದ್ರ ಸರ್ಕಾರವು ಒಂಬತ್ತು ವರ್ಷಗಳಿಂದ ಈ ವಿಷಯದಲ್ಲಿ ವಿಳಂಬ ಮಾಡುತ್ತಿದೆ' ಎಂದು ಸ್ವಾಮಿ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠವು, 'ನಾವು ಈ ವಿಚಾರವನ್ನು ವಿಚಾರಣೆಗೆ ಮೊದಲೇ ಪಟ್ಟಿ ಮಾಡುತ್ತೇವೆ' ಎಂದು ಹೇಳಿದೆ.
ಜನವರಿ 19 ರಂದು, ರಾಮಸೇತುವನ್ನು ರಾಷ್ಟ್ರೀಯ ಪಾರಂಪರಿಕ ಸ್ಮಾರಕವೆಂದು ಘೋಷಿಸುವ ವಿಷಯವನ್ನು ಪರಿಶೀಲಿಸಲಾಗುತ್ತಿದೆ ಎಂದು ಕೇಂದ್ರವು ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು. 

ಈ ಬಗ್ಗೆ ನಿರ್ಧಾರಕ್ಕೆ ಬರಲು ಕೇಂದ್ರ ಸರ್ಕಾರಕ್ಕೆ ಸೂಚಿಸಿದ ಪೀಠವು, ಇದರಲ್ಲಿ ಸ್ವಾಮಿ ಅವರಿಗೆ ಅಸಮಾಧಾನವಿದ್ದರೆ ಮತ್ತು  ಅವರ ಮಧ್ಯಂತರ ಅರ್ಜಿ ವಿಲೇವಾರಿ ಮಾಡಿದರೆ ಅವರು ಮುಂದಿನ ಹಂತಕ್ಕೆ ಹೋಗಲು ಸ್ವತಂತ್ರರು ಎಂದು ಹೇಳಿತು.

ರಾಮಸೇತುವನ್ನು ಆಡಮ್‌ನ ಸೇತುವೆ ಎಂದೂ ಕರೆಯುತ್ತಾರೆ. ಇದು ತಮಿಳುನಾಡಿನ ಆಗ್ನೇಯ ಕರಾವಳಿಯಲ್ಲಿರುವ ಪಂಬನ್ ದ್ವೀಪ ಮತ್ತು ಶ್ರೀಲಂಕಾದ ವಾಯುವ್ಯ ಕರಾವಳಿಯ ಮನ್ನಾರ್ ದ್ವೀಪದ ನಡುವಿನ ಸುಣ್ಣದ ಕಲ್ಲುಗಳ ಸರಪಳಿಯಾಗಿದೆ.

SCROLL FOR NEXT