ದೇಶ

ಪ್ರತಿಪಕ್ಷ ನಾಯಕರಿಗೆ ಇಡಿ-ಸಿಬಿಐ, ಮೆಹುಲ್ ಚೋಕ್ಸಿಗೆ ಇಂಟರ್‌ಪೋಲ್ ಇಲ್ಲ: ಮಲ್ಲಿಕಾರ್ಜುನ ಖರ್ಗೆ

Ramyashree GN

ನವದೆಹಲಿ: ವಿದೇಶಕ್ಕೆ ಪರಾರಿಯಾಗಿರುವ ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿ ಹೆಸರನ್ನು ಇಂಟರ್‌ಪೋಲ್ ತನ್ನ ರೆಡ್ ನೋಟಿಸ್ ಪಟ್ಟಿಯಿಂದ ಕೈಬಿಟ್ಟ ನಂತರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಂಗಳವಾರ ಕೇಂದ್ರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

'ಇ.ಡಿ, ಸಿಬಿಐಗಳು ವಿರೋಧ ಪಕ್ಷದ ನಾಯಕರಿಗೆ ಆದರೆ ಮೋದಿಜಿಯ ಮೆಹುಲ್‌ಬಾಯಿ ಇಂಟರ್‌ಪೋಲ್‌ನಿಂದ ಪರಿಹಾರ ಪಡೆದರು. ಅವರು ತಮ್ಮ ಆತ್ಮೀಯ ಗೆಳೆಯನಿಗಾಗಿ ಸಂಸತ್ತನ್ನು ನಿಷ್ಕ್ರಿಯಗೊಳಿಸಬಹುದಾದರೆ, ಅವರು ಐದು ವರ್ಷಗಳ ಹಿಂದೆ ದೇಶದಿಂದ ಓಡಿಹೋಗಲು ಸಹಾಯ ಮಾಡಿದ ತನ್ನ ಹಳೆಯ ಸ್ನೇಹಿತನಿಗೆ ಈಗ ಸಹಾಯವನ್ನು ಹೇಗೆ ನಿರಾಕರಿಸುತ್ತಾರೆ' ಎಂದು ದೂರಿದ್ದಾರೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ (ಪಿಎನ್‌ಬಿ) 11,356.84 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಆರೋಪಿಯಾಗಿರುವ ಮೆಹುಲ್ ಚೋಕ್ಸಿಯನ್ನು ಇಂಟರ್‌ಪೋಲ್ ತನ್ನ 'ರೆಡ್' ನೋಟಿಸ್ ಪಟ್ಟಿಯಿಂದ ಹೊರಗಿಟ್ಟಿದೆ.

2018ರ ಡಿಸೆಂಬರ್‌ನಲ್ಲಿ ಚೋಕ್ಸಿಯನ್ನು ರೆಡ್ ಕಾರ್ನರ್ ನೋಟಿಸ್ ಪಟ್ಟಿಗೆ ಸೇರಿಸಲಾಯಿತು. ಮೂಲಗಳ ಪ್ರಕಾರ, ಭಾರತ ಸರ್ಕಾರದ ಅಧಿಕಾರಿಗಳು ಇಂಟರ್‌ಪೋಲ್‌ನ ಕ್ರಮವನ್ನು ವಿರೋಧಿಸಿದರೂ, ಅದು ತನ್ನ ನಿರ್ಧಾರವನ್ನು ಹಿಂತೆಗೆದುಕೊಳ್ಳಲು ನಿರಾಕರಿಸಿತು ಎನ್ನಲಾಗಿದೆ.

ಇದರಿಂದ ಮೆಹುಲ್ ಚೋಕ್ಸಿ ಅವರ ಗಡಿಪಾರಿಗಾಗಿ ಕಾಯುತ್ತಿದ್ದ ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯ (ಇ.ಡಿ)ಗೆ ತೀವ್ರ ಹಿನ್ನಡೆಯಾಗಿದೆ.

ಆದಾಗ್ಯೂ, ಆಂಟಿಗುವಾದಿಂದ ಚೋಕ್ಸಿಯನ್ನು ಭಾರತಕ್ಕೆ ಹಸ್ತಾಂತರಿಸುವ ಕ್ರಮದ ಮೇಲೆ ಇದು ಪರಿಣಾಮ ಬೀರುವುದಿಲ್ಲ ಎಂದು ಈ ವಿಷಯದ ತನಿಖೆ ನಡೆಸುತ್ತಿರುವ ಅಧಿಕಾರಿಗಳು ತಿಳಿಸಿದ್ದಾರೆ.

ಚೋಕ್ಸಿ ಸದ್ಯ ಕೆರಿಬಿಯನ್ ದ್ವೀಪ ರಾಷ್ಟ್ರದಲ್ಲಿದ್ದಾರೆ ಮತ್ತು ಭಾರತೀಯ ಅಧಿಕಾರಿಗಳು ಅವರನ್ನು ಹಸ್ತಾಂತರಿಸುವಂತೆ ಆಂಟಿಗ್ವಾನ್ ಅಧಿಕಾರಿಗಳನ್ನು ಕೇಳಿದ್ದಾರೆ. ಆದ್ದರಿಂದ ಅವರನ್ನು ವಿಚಾರಣೆಗೆ ಒಳಪಡಿಸಬಹುದು.

SCROLL FOR NEXT