ದೇಶ

ATM ಗಳಿಗೆ 2000 ರೂ ನೋಟುಗಳ ತುಂಬಲು/ತುಂಬದಿರುವ ಬಗ್ಗೆ ಬ್ಯಾಂಕ್ ಗಳಿಗೆ ಯಾವುದೇ ಸೂಚನೆ ನೀಡಿಲ್ಲ: ನಿರ್ಮಲಾ ಸೀತಾರಾಮನ್

Srinivasamurthy VN

ನವದೆಹಲಿ: ಎಟಿಎಂಗಳಲ್ಲಿ 2000 ರೂ ನೋಟುಗಳ ಲಭ್ಯತೆ ಕುರಿತು ಸ್ಪಷ್ಟನೆ ನೀಡಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ATM ಗಳಿಗೆ 2000 ರೂ ನೋಟುಗಳ ತುಂಬಲು/ತುಂಬದಿರುವ ಬಗ್ಗೆ ಬ್ಯಾಂಕ್ ಗಳಿಗೆ ಯಾವುದೇ ಸೂಚನೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ದೇಶಾದ್ಯಂತ ಎಟಿಎಂಗಳಿಗೆ 2000 ರೂಪಾಯಿ ನೋಟುಗಳನ್ನು ಲೋಡ್ ಮಾಡಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಬ್ಯಾಂಕ್‌ಗಳಿಗೆ ಯಾವುದೇ ಸೂಚನೆ ನೀಡಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾಹಿತಿ ನೀಡಿದ ಅವರು ಹಿಂದಿನ ಬಳಕೆ, ಗ್ರಾಹಕರ ಅಗತ್ಯತೆ, ಕಾಲೋಚಿತ ಪ್ರವೃತ್ತಿ ಇತ್ಯಾದಿಗಳ ಆಧಾರದ ಮೇಲೆ ಬ್ಯಾಂಕ್‌ಗಳು ಎಟಿಎಂಗಳಿಗೆ ಮೊತ್ತ ಮತ್ತು ಮುಖಬೆಲೆಯ ಅಗತ್ಯತೆಯನ್ನು ನೋಡಿಕೊಂಡು ತಮ್ಮದೇ ಆದ ಮೌಲ್ಯಮಾಪನ ಮಾಡಿದ ನಂತರ ಅವರು ನಿರ್ಧರಿಸಲಿದ್ದಾರೆ ಎಂದು ಹೇಳಿದ್ದಾರೆ .

ಭಾರತೀಯ ರಿಸರ್ವ್ ಬ್ಯಾಂಕ್- ಆರ್‌ಬಿಐ ವಾರ್ಷಿಕ ವರದಿಗಳನ್ನು ಉಲ್ಲೇಖಿಸಿ, 2019-20 ರಿಂದ 2000 ಮುಖಬೆಲೆಯ ನೋಟುಗಳ ಪೂರೈಕೆಗೆ ಇಂಡೆಂಟ್ ಇರಿಸಿಲ್ಲ. 2016 ರಲ್ಲಿ ಹಳೆಯ 500 ರೂಪಾಯಿ ನೋಟುಗಳು ಮತ್ತು 1000 ರೂಪಾಯಿಗಳ ನೋಟುಗಳ ಅಮಾನ್ಯೀಕರಣದ ನಂತರ ಸರ್ಕಾರ ಮತ್ತು ಆರ್ ಬಿಐ 2000 ರೂಪಾಯಿ ನೋಟು ವ್ಯವಸ್ಥೆ ಜಾರಿ ಮಾಡಿತ್ತು. ಒಂದೆರಡು ವರ್ಷಗಳ ಎಟಿಎಂಗಳಲ್ಲಿ 2000 ಮುಖಬೆಲೆಯ ನೋಟುಗಳು ಲಭ್ಯವಿದ್ದವು. ಆದರೆ ಗ್ರಾಹಕರ ಅಗತ್ಯಕ್ಕೆ ಅನುಗುಣವಾಗಿ ಎಟಿಎಂಗಳಿಂದ 2 ಸಾವಿರ ನೋಟುಗಳನ್ನು ವಾಪಸ್ ಪಡೆಯಲಾಗಿತ್ತು. ಬರೀ ಬ್ಯಾಂಕ್ ಗಳಲ್ಲಿ 2 ಸಾವಿರ ಮುಖಬೆಲೆಯ ನೋಟುಗಳು ಚಲಾವಣೆಯಲ್ಲಿವೆ ಎಂದು ಹೇಳಿದ್ದಾರೆ.

ಎಟಿಎಂಗಳಲ್ಲಿ 2 ಸಾವಿರ ಮುಖಬೆಲೆಯ ನೋಟುಗಳನ್ನು ಎಟಿಎಂಗೆ ತುಂಬುವಂತೆ ಬ್ಯಾಂಕ್ ಗಳಿಂದಲೂ ಯಾವುದೇ ಬೇಡಿಕೆ ಬಂದಿಲ್ಲ. ಗ್ರಾಹಕರಿಂದ ಬೇಡಿಕೆ ಬಂದರೆ ಈ ಬಗ್ಗೆ ಬ್ಯಾಂಕ್ ಗಳು ನಿರ್ಧಾರ ಕೈಗೊಳ್ಳಲಿವೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಭಾರತೀಯ ರಿಸರ್ವ್ ಬ್ಯಾಂಕ್ (RBI) ಯ ವಾರ್ಷಿಕ ವರದಿಗಳ ಪ್ರಕಾರ, ಮಾರ್ಚ್ 2017 ರ ಅಂತ್ಯದ ವೇಳೆಗೆ ಚಲಾವಣೆಯಲ್ಲಿರುವ 500 ಮತ್ತು 2,000 ರೂ ಮುಖಬೆಲೆಯ ಬ್ಯಾಂಕ್ ನೋಟುಗಳ ಒಟ್ಟು ಮೌಲ್ಯ ಮತ್ತು 2022 ರ ಮಾರ್ಚ್ ಅಂತ್ಯದ ವೇಳೆಗೆ 9.512 ಲಕ್ಷ ಕೋಟಿ ಮತ್ತು 27.057 ಲಕ್ಷ ರೂ. ಕೋಟಿ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ವಿತ್ತ ಸಚಿವರು, ಮಾರ್ಚ್ 31, 2023 ರಂತೆ ಕೇಂದ್ರ ಸರ್ಕಾರದ ಸಾಲ/ಬಾಧ್ಯತೆಗಳ ಒಟ್ಟು ಮೊತ್ತವು ಸುಮಾರು 155.8 ಲಕ್ಷ ಕೋಟಿ (ಜಿಡಿಪಿಯ 57.3%) ಎಂದು ಅಂದಾಜಿಸಲಾಗಿದೆ ಎಂದು ತಿಳಿಸಿದರು.

SCROLL FOR NEXT