ದೇಶ

ಅದಾನಿ ಗ್ರೂಪ್ ಮೇಲಿನ ಆರೋಪಗಳ ಬಗ್ಗೆ ಜಂಟಿ ಸಂಸದೀಯ ಸಮಿತಿ ತನಿಖೆಗೆ ಒತ್ತಾಯಿಸಿ ಸಂಸತ್ ಭವನದಲ್ಲಿ ವಿರೋಧ ಪಕ್ಷ ನಾಯಕರ ಪ್ರತಿಭಟನೆ

Sumana Upadhyaya

ನವದೆಹಲಿ: ಅದಾನಿ ವಿವಾದದ ಕುರಿತು ಜಂಟಿ ಸಂಸದೀಯ ಸಮಿತಿ (JPC) ತನಿಖೆಗೆ ಆಗ್ರಹಿಸಿ ಹಲವು ವಿರೋಧ ಪಕ್ಷದ ನಾಯಕರು ಮಂಗಳವಾರ ಸಂಸತ್ ಭವನದ ಕಾರಿಡಾರ್‌ನಲ್ಲಿ ಪ್ರತಿಭಟನೆ ನಡೆಸಿ ಘೋಷಣೆಗಳನ್ನು ಕೂಗಿದ್ದಾರೆ.

ಸಂಸತ್ ಭವನದ ಮೊದಲ ಮಹಡಿಯಲ್ಲಿ ‘ನಮಗೆ ಜೆಪಿಸಿ ಬೇಕು’ ಎಂಬ ಬ್ಯಾನರ್‌ ಕೂಡ ನೇತು ಹಾಕಿದ್ದರು. ಟಿಎಂಸಿ ಸಂಸದರು ಸಂಸತ್ತಿನ ಆವರಣದಲ್ಲಿ ಪ್ರತ್ಯೇಕ ಪ್ರತಿಭಟನೆ ನಡೆಸಿ ಅದಾನಿ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮೌನ ಮುರಿಯಬೇಕು ಎಂದು ಒತ್ತಾಯಿಸಿದರು.

ಉದ್ಯಮಿ ಗೌತಮ್ ಅದಾನಿ ಅವರ ಅದಾನಿ ಗ್ರೂಪ್ ವಿರುದ್ಧ ಹೊರಿಸಲಾದ ವಂಚನೆಯ ಆರೋಪಗಳ ಬಗ್ಗೆ ತನಿಖೆಗೆ ಆದೇಶಿಸದೆ ಸರ್ಕಾರ ಸಹಾಯ ಮಾಡಿದೆ ಎಂದು ಆರೋಪಿಸಿ, ಪಕ್ಷವು ಅದಾನಿಯನ್ನು ಬಂಧಿಸಬೇಕೆಂದು ಒತ್ತಾಯಿಸಿತು.

ವಿರೋಧ ಪಕ್ಷಗಳ ನಾಯಕರು ಈ ಹಿಂದೆ ಸಂಸತ್ತು ಭವನದಲ್ಲಿ ಸಭೆ ನಡೆಸಿ ಅದಾನಿ ವಿಷಯದ ಬಗ್ಗೆ ಜೆಪಿಸಿ ತನಿಖೆಗೆ ಒತ್ತಾಯಿಸಲು ನಿರ್ಧರಿಸಿದ್ದರು. ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್, ಡಿಎಂಕೆ, ಆರ್‌ಜೆಡಿ, ಸಿಪಿಐ-ಎಂ, ಸಿಪಿಐ, ಎನ್‌ಸಿಪಿ, ಶಿವಸೇನೆ (UBT), ಜೆಡಿಯು, ಜೆಎಂಎಂ, ಐಯುಎಂಎಲ್, ಎಎಪಿ ಮತ್ತು ಎಂಡಿಎಂಕೆ ಸೇರಿದಂತೆ ವಿರೋಧ ಪಕ್ಷಗಳ ನಾಯಕರು ಭಾಗವಹಿಸಿದ್ದರು.

ಅದಾನಿ ವಿಚಾರದಲ್ಲಿ ಗದ್ದಲದ ನಡುವೆಯೇ ಸಂಸತ್ತಿನ ಉಭಯ ಸದನಗಳನ್ನು ಇಂದು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು. ರಾಹುಲ್ ಗಾಂಧಿಯವರು ತಮ್ಮ ಪ್ರಜಾಪ್ರಭುತ್ವದ ಟೀಕೆಗಳಿಗೆ ಕ್ಷಮೆಯಾಚಿಸಬೇಕು ಎಂದು ಆಡಳಿತ ಪಕ್ಷದ ಸದಸ್ಯರ ಬೇಡಿಕೆಯ ನಡುವೆಯೇ ಸದನ ಕಲಾಪ ಮುಂದೂಡಲಾಯಿತು.

ಇಂದು ಬೆಳಿಗ್ಗೆ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಅವರಿಗೆ ಮಾತನಾಡಲು ಸಭಾಪತಿ ಅನುಮತಿ ನೀಡಿದರು. ಆದರೆ ಬಿಜೆಪಿ ಸಂಸದರು ಘೋಷಣೆಗಳನ್ನು ಕೂಗುವ ಮೂಲಕ ಅವಕಾಶ ನೀಡಲಿಲ್ಲ. ನಂತರ ಸಭಾಪತಿ ಕಲಾಪವನ್ನು ಮುಂದೂಡಿದರು. ಮೋದಿ ಸರ್ಕಾರ ಈ ರೀತಿ ಏಕೆ ವರ್ತಿಸುತ್ತಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಸದನವನ್ನು ಮುಂದೂಡಿದ ನಂತರ ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದಾರೆ. 

ಅದಾನಿ ಗ್ರೂಪ್ ಸಮಸ್ಯೆಯ ಬಗ್ಗೆ ಜೆಪಿಸಿ ತನಿಖೆಗೆ ವಿರೋಧ ಪಕ್ಷಗಳು ಒತ್ತಾಯಿಸುತ್ತಿವೆ. ಅಮೆರಿಕ ಮೂಲದ ಹಿಂಡೆನ್‌ಬರ್ಗ್ ರಿಸರ್ಚ್ ವರದಿಯು ಅದಾನಿ ಗ್ರೂಪ್‌ನಿಂದ ಹಣಕಾಸು ಅಕ್ರಮಗಳು ಮತ್ತು ಸ್ಟಾಕ್ ಮ್ಯಾನಿಪುಲೇಷನ್ ಆರೋಪಗಳನ್ನು ಮಾಡಿದ್ದು, ಅದಾನಿ ಗ್ರೂಪ್ ನ ವ್ಯವಹಾರಗಳ ಬಗ್ಗೆ ಜೆಪಿಸಿ ತನಿಖೆಯಿಂದ ಮಾತ್ರ ಸತ್ಯ ಹೊರಬರಲು ಸಾಧ್ಯ ಎಂದು ಹೇಳಿದೆ.

ಹಿಂಡನ್ ಬರ್ಗ್ ವರದಿ ಮತ್ತು ತನ್ನ ಮೇಲಿನ ಆರೋಪಗಳನ್ನು ಅದಾನಿ ಗ್ರೂಪ್ ನಿರಾಕರಿಸುತ್ತಿದ್ದು, ತಾನು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳುತ್ತಾ ಬಂದಿದೆ.

SCROLL FOR NEXT