ದೇಶ

ರಾಹುಲ್ ಗಾಂಧಿಗೆ 2 ವರ್ಷ ಜೈಲು ಶಿಕ್ಷೆ: ಪಿತೂರಿ ಎಂದ ಕೇಜ್ರಿವಾಲ್!

Nagaraja AB

ನವದೆಹಲಿ: ಮೋದಿ ಉಪನಾಮ ಟೀಕೆಗಳಿಗೆ ಸಂಬಂಧಿಸಿದಂತೆ ಎಐಸಿಸಿ ಮಾಜಿ ಅಧ್ಯಕ್ಷ ದೋಷಿ ಎಂದು ಪರಿಗಣಿಸಿ, ಸೂರತ್ ನ್ಯಾಯಾಲಯ 2 ವರ್ಷ ಜೈಲು ಶಿಕ್ಷೆ ವಿಧಿಸಿ ಜಾಮೀನು ಮಂಜೂರು ಮಾಡಿದ ನಂತರ ಆಮ್ ಆದ್ಮಿ ಪಕ್ಷ ರಾಹುಲ್ ಬೆಂಬಲಕ್ಕೆ ಬಂದಿದೆ. ಬಿಜೆಪಿಯೇತರ ನಾಯಕರು ಮತ್ತು ಪಕ್ಷಗಳನ್ನು ವಿಚಾರಣೆಗೆ ಒಳಪಡಿಸುವ ಮೂಲಕ ಅವರನ್ನು ನಿರ್ಮೂಲನೆ ಮಾಡಲು ಸಂಚು ರೂಪಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ. 

2019ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಅವಹೇಳನಾಕಾರಿ ಟೀಕೆಗಳಿಗಾಗಿ ಸೂರತ್ ನ್ಯಾಯಾಲಯ ರಾಹುಲ್ ಗಾಂಧಿ ಅವರನ್ನು ದೋಷಿ ಎಂದು 2 ವರ್ಷ ಜೈಲು ಶಿಕ್ಷೆ ವಿಧಿಸಿ ನಂತರ ಜಾಮೀನು ಮಂಜೂರು ಮಾಡಿದೆ. 30 ದಿನಗಳವರೆಗೆ ಶಿಕ್ಷೆ ಅಮಾನತುಗೊಳಿಸಿ ತೀರ್ಪು ನೀಡಿದೆ.

ಈ ಕುರಿತು ಟ್ವೀಟ್ ಮಾಡಿರುವ ಕೇಜ್ರಿವಾಲ್, 'ಬಿಜೆಪಿಯೇತರ ನಾಯಕರು ಹಾಗೂ ಪಕ್ಷಗಳ ವಿರುದ್ಧ ಕಾನೂನು ಕ್ರಮ ಜರುಗಿಸುವ ಮೂಲಕ ಅವರನ್ನು ಮಟ್ಟ ಹಾಕಲು ಸಂಚು ರೂಪಿಸಲಾಗುತ್ತಿದೆ. ನಮಗೆ ಕಾಂಗ್ರೆಸ್ ಜೊತೆ ಭಿನ್ನಾಭಿಪ್ರಾಯವಿದೆ, ಆದರೆ ಈ ರೀತಿ ಮಾನನಷ್ಟ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರನ್ನು ಸಿಲುಕಿಸುವುದು ಸರಿಯಲ್ಲ. 'ಪ್ರಶ್ನೆ ಕೇಳುವುದು ಸಾರ್ವಜನಿಕರು ಮತ್ತು ಪ್ರತಿಪಕ್ಷಗಳ ಕೆಲಸ. ನಾವು ನ್ಯಾಯಾಲಯವನ್ನು ಗೌರವಿಸುತ್ತೇವೆ ಆದರೆ ನಿರ್ಧಾರವನ್ನು ಒಪ್ಪುವುದಿಲ್ಲ ಎಂದು ಕೇಜ್ರಿವಾಲ್ ಹೇಳಿದ್ದಾರೆ. 

ಎಎಪಿ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಮಾತನಾಡಿ, ವಿರೋಧ ಪಕ್ಷಗಳು ಪ್ರಜಾಪ್ರಭುತ್ವದ ತಿರುಳಾಗಿದ್ದು, ಭಿನ್ನಾಭಿಪ್ರಾಯವನ್ನು ಹತ್ತಿಕ್ಕಬಾರದು ಎಂದಿದ್ದಾರೆ.

'ರಾಹುಲ್ ಗಾಂಧಿ ವಿರುದ್ಧದ ನ್ಯಾಯಾಲಯದ ತೀರ್ಪನ್ನು ಗೌರವಯುತವಾಗಿ ಒಪ್ಪುವುದಿಲ್ಲ. ವಿಪಕ್ಷಗಳು ಪ್ರಜಾಪ್ರಭುತ್ವದ ತಿರುಳಾಗಿದೆ. ಭಿನ್ನಾಭಿಪ್ರಾಯವನ್ನು ಹತ್ತಿಕ್ಕಬಾರದು. ಭಾರತವು ವಿಮರ್ಶೆಯ ಬಲವಾದ ಸಂಪ್ರದಾಯವನ್ನು ಹೊಂದಿದೆ. ಇದನ್ನು ಒಂದು ಸಿದ್ಧಾಂತ, ಒಂದು ಪಕ್ಷ, ಒಬ್ಬ ನಾಯಕ ಎಂಬ ದೃಷ್ಟಿಕೋನಕ್ಕೆ ಇಳಿಸುವ ಪ್ರಯತ್ನ ಸಂವಿಧಾನ ವಿರೋಧಿ ಮತ್ತು ಪ್ರಜಾಪ್ರಭುತ್ವ ವಿರೋಧಿಯಾಗಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

SCROLL FOR NEXT