ದೇಶ

ಶೂರ್ಪನಖಿ ಎಂದಿದ್ದ ಪ್ರಧಾನಿ ಮೋದಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ: ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ

Ramyashree GN

ನವದೆಹಲಿ: ಮೋದಿ ಉಪನಾಮದ ಬಗ್ಗೆ ಮಾಡಿದ ಟೀಕೆಗಳಿಗೆ ಸಂಬಂಧಿಸಿದಂತೆ 2019ರ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿಯನ್ನು ಸೂರತ್ ನ್ಯಾಯಾಲಯವು ತಪ್ಪಿತಸ್ಥರೆಂದು ಘೋಷಿಸಿದ ದಿನದ ನಂತರ, ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ ಅವರು ತಮ್ಮ ನಗುವಿಗೆ 'ಶೂರ್ಪನಖಿ' ಎಂದಿದ್ದ ಪ್ರಧಾನಿ ಮೋದಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಘೋಷಿಸಿದರು.

2018ರಲ್ಲಿ ಸಂಸತ್ತಿನಲ್ಲಿ ನೀಡಿದ ಹೇಳಿಕೆಯಿಂದ ಮೋದಿ ತಮ್ಮನ್ನು ಅವಮಾನಿಸಿದ್ದಾರೆ ಎಂದು ಚೌಧರಿ ಟ್ವಿಟರ್‌ನಲ್ಲಿ ಶುಕ್ರವಾರ ಹೇಳಿದ್ದಾರೆ. ಅಲ್ಲದೆ, ಅವರು ಸದನದ ಕಲಾಪಗಳ ವಿಡಿಯೋವನ್ನು ಸಹ ಪೋಸ್ಟ್ ಮಾಡಿದ್ದಾರೆ.

'ಈ ಕ್ಲಾಸ್‌ಲೆಸ್ ಮೆಗಾಲೊಮೇನಿಯಾಕ್ (ಅಧಿಕಾರ, ಸಂಪತ್ತು ಮತ್ತು ಸ್ಥಾನಮಾನದ ಗೀಳಿನ ಬಯಕೆಯನ್ನು ಹೊಂದಿರುವ ವ್ಯಕ್ತಿಯನ್ನು ಸೂಚಿಸುತ್ತದೆ) ಸದನದಲ್ಲಿ ನನ್ನನ್ನು ಶೂರ್ಪನಖಿ ಎಂದು ಉಲ್ಲೇಖಿಸಿದ್ದಾರೆ. ನಾನು ಅವರ  ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ. ಈಗ ನ್ಯಾಯಾಲಯಗಳು ಎಷ್ಟು ವೇಗವಾಗಿ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ನೋಡೋಣ' ಎಂದಿದ್ದಾರೆ.

ವಿಡಿಯೋದಲ್ಲಿ, ಸಭಾಪತಿಯನ್ನುದ್ದೇಶಿಸಿ ಮಾತನಾಡಿರುವ ಮೋದಿ, 'ರೇಣುಕಾ ಜೀ ಅವರಿಗೆ ಏನನ್ನೂ ಹೇಳಬೇಡಿ ಎಂದು ನಾನು ವಿನಂತಿಸುತ್ತೇನೆ. ರಾಮಾಯಣ ಧಾರಾವಾಹಿಯ ನಂತರ ಇಂದು ಅಂತಹ ನಗುವನ್ನು ಕೇಳಲು ನಾನು ಭಾಗ್ಯವಂತನಾಗಿದ್ದೇನೆ' ಎಂದಿದ್ದರು. 

ಮೋದಿ ಭಾಷಣದ ವೇಳೆ ಚೌಧರಿಯು ಜೋರಾಗಿ ನಗುತ್ತಿದ್ದರಿಂದ ಸಭಾಪತಿ ಚೌಧರಿಯವರಿಗೆ ಮೌನವಾಗಿರುವಂತೆ ಸೂಚಿಸಿದ್ದರು. ಈ ವೇಳೆ ಮೋದಿ ರಾಮಾಯಣವನ್ನು ಉಲ್ಲೇಖಿಸಿ ಹೇಳಿದ್ದರು.

SCROLL FOR NEXT