ದೇಶ

ರಾಷ್ಟ್ರ ರಾಜಧಾನಿಯ ಕೆಲವು ಭಾಗಗಳಲ್ಲಿ ಭಾರಿ ಮಳೆ: ಹವಾಮಾನ ಇಲಾಖೆ

Ramyashree GN

ನವದೆಹಲಿ: ಶನಿವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ದೆಹಲಿಯಲ್ಲಿ 12 ಮಿಮೀ ಮಳೆ ಸುರಿದಿದೆ. ಇದು ಕಳೆದ ಮೂರು ವರ್ಷಗಳಲ್ಲಿ ಮಾರ್ಚ್‌ ತಿಂಗಳಲ್ಲಿ ದಿನವೊಂದರಲ್ಲಿ ಸುರಿದ ಗರಿಷ್ಠ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

ದೆಹಲಿಯ ಪ್ರಾಥಮಿಕ ಹವಾಮಾನ ಕೇಂದ್ರವಾದ ಸಫ್ದರ್‌ಜಂಗ್ ವೀಕ್ಷಣಾಲಯವು, ಶುಕ್ರವಾರ ಬೆಳಿಗ್ಗೆ 8.30ರಿಂದ ಶನಿವಾರ ಬೆಳಿಗ್ಗೆ 8.30ರ ನಡುವೆ 12 ಮಿಮೀ ಮಳೆ ಸುರಿದಿದೆ ಎಂದಿದೆ.

ನಗರದಲ್ಲಿ ಕನಿಷ್ಠ ತಾಪಮಾನ 15.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದು ಈ ಋತುವಿನ ಸರಾಸರಿಗಿಂತ ಎರಡು ಪಟ್ಟು ಕಡಿಮೆ. ಆರ್ದ್ರತೆಯು ಬೆಳಗ್ಗೆ 8.30ಕ್ಕೆ ಶೇ 85ರಷ್ಟು ದಾಖಲಾಗಿದೆ  ಎಂದು ಐಎಂಡಿ ತಿಳಿಸಿದೆ.

ಹಗಲಿನಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರುವ ಸಾಧ್ಯತೆಯಿದ್ದು, ಗರಿಷ್ಠ ತಾಪಮಾನವು ಸುಮಾರು 30 ಡಿಗ್ರಿ ಸೆಲ್ಸಿಯಸ್ ಆಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಳಿಗ್ಗೆ 9 ಗಂಟೆಗೆ ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕ (AQI) 'ಮಧ್ಯಮ' ವಿಭಾಗದಲ್ಲಿ 102 ರಲ್ಲಿ ದಾಖಲಾಗಿದೆ.

ಸೊನ್ನೆ ಮತ್ತು 50 ರ ನಡುವಿನ AQI ಅನ್ನು 'ಉತ್ತಮ', 51 ಮತ್ತು 100ರ ನಡುವೆ 'ತೃಪ್ತಿದಾಯಕ', 101 ಮತ್ತು 200 ರ ನಡುವೆ 'ಮಧ್ಯಮ', 201 ಮತ್ತು 300 ರ ನಡುವಿನ ಎಕ್ಯೂಐ ಅನ್ನು 'ಕಳಪೆ',  301 ಮತ್ತು 400ರ ನಡುವೆ 'ಅತ್ಯಂತ ಕಳಪೆ' ಮತ್ತು 401 ಮತ್ತು 500 ನಡುವಿನ ಎಕ್ಯೂಐ ಅನ್ನು 'ತೀವ್ರ ಕಳಪೆ' ಎಂದು ಪರಿಗಣಿಸಲಾಗುತ್ತದೆ.

ಶುಕ್ರವಾರ ಸಂಜೆ ರಾಷ್ಟ್ರ ರಾಜಧಾನಿಯ ಕೆಲವು ಭಾಗಗಳಲ್ಲಿ ಭಾರಿ ಮಳೆಯಾಗಿದೆ.

SCROLL FOR NEXT