ದೇಶ

ಆಸ್ತಿ ವಿವಾದ: ಬಿಹಾರದಲ್ಲಿ ಎಂಟು ವರ್ಷದ ಬಾಲಕಿಗೆ ಗುಂಡಿಕ್ಕಿ ಹತ್ಯೆ

Lingaraj Badiger

ಪಾಟ್ನಾ: ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಎಂಟು ವರ್ಷದ ಬಾಲಕಿಯ ಮನೆಗೆ ನುಗ್ಗಿದ ದುಷ್ಕರ್ಮಿಗಳು ಮನಬಂದಂತೆ ಗುಂಡು ಹಾರಿಸಿ ಹತ್ಯೆಗೈದ ಘಟನೆ ಬಿಹಾರದ ಭೋಜ್‌ಪುರ ಜಿಲ್ಲೆಯಲ್ಲಿ ನಡೆದಿದೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

ಶುಕ್ರವಾರ ರಾತ್ರಿ ಭಿಲಾಯಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕೃತ್ಯ ಎಸಗಿದ ಆರೋಪಿ ಗ್ರಾಮದಿಂದ ಪರಾರಿಯಾಗಿದ್ದಾನೆ.

"ತಮಗೂ ಮತ್ತು ರೋಹ್ತಾಸ್ ಜಿಲ್ಲೆಯ ವ್ಯಕ್ತಿಯೊಂದಿಗೆ ಆಸ್ತಿ ವಿವಾದವಿದೆ. ಹೀಗಾಗಿ ಅವರು ನನ್ನನ್ನು ಕೊಲ್ಲಲು ಶಸ್ತ್ರಾಸ್ತ್ರಗಳೊಂದಿಗೆ ಬಲವಂತವಾಗಿ ನನ್ನ ಮನೆಗೆ ನುಗ್ಗಿ ಮನಬಂದಂತೆ ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ನನ್ನ ಮಗಳು ಸಾವನ್ನಪ್ಪಿದ್ದಾರೆ" ಎಂದು ಬಾಲಕಿ ತಂದೆ ಕೃಷ್ಣ ಸಿಂಗ್ ಹೇಳಿದ್ದಾರೆ.

"ನಾಲ್ಕು ವರ್ಷಗಳ ಹಿಂದೆ ನನ್ನ ಸಹೋದರನ ಕೊಲೆಯಲ್ಲಿ ಅವರು ಭಾಗಿಯಾಗಿದ್ದರು. ಆ ಸಮಯದಲ್ಲಿ, ನಾನು ಕೂಡ ಗುಂಡೇಟಿನಿಂದ ಗಾಯಗೊಂಡಿದ್ದೆ. ಆದರೆ ಅದೃಷ್ಟವಶಾತ್ ದಾಳಿಯಲ್ಲಿ ಬದುಕುಳಿದಿದ್ದೆ" ಎಂದು ಸಿಂಗ್ ತಿಳಿಸಿದ್ದಾರೆ.

"ನಾನು ಪಕ್ಕದ ರೋಹ್ತಾಸ್ ಜಿಲ್ಲೆಯ ದಿನರಾ ಪೊಲೀಸ್ ಠಾಣೆ ವ್ಯಾಪ್ತಿಯ ಕುಂಡ್ ಗ್ರಾಮದವನು. ಗ್ರಾಮದ ಪ್ರಬಲ ವ್ಯಕ್ತಿಯೊಂದಿಗೆ ಆಸ್ತಿ ವಿವಾದ ಇದೆ. ಅವರು ನನ್ನ 25 ಎಕರೆ ಜಮೀನಿನ ಮೇಲೆ ಕಣ್ಣಿಟ್ಟಿದ್ದಾರೆ. ಅವರು ನನ್ನ ಕುಟುಂಬದ ಇಬ್ಬರನ್ನು ಕೊಂದಿದ್ದಾರೆ" ಎಂದು ಕೃಷ್ಣ ಸಿಂಗ್ ಹೇಳಿದ್ದಾರೆ.

"ನಾವು ಅಪ್ರಾಪ್ತ ಬಾಲಕಿಯ ಶವವನ್ನು ವಶಪಡಿಸಿಕೊಂಡಿದ್ದೇವೆ ಮತ್ತು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದೇವೆ. ಈ ಸಂಬಂಧ ಎಫ್‌ಐಆರ್ ದಾಖಲಿಸಲಾಗಿದೆ. ಆರೋಪಿಯನ್ನು ಬಂಧಿಸಲು ಪ್ರಯತ್ನಿಸಲಾಗುತ್ತಿದೆ" ಎಂದು ಉದ್ವಂತ್ ನಗರ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

SCROLL FOR NEXT