ದೇಶ

ಅದಾನಿ ವಿಚಾರದಲ್ಲಿ ತನಿಖೆ ಯಾಕಿಲ್ಲ, ಇಷ್ಟು ಭಯ ಯಾಕೆ: ಪ್ರಧಾನಿ ನರೇಂದ್ರ ಮೋದಿಗೆ ರಾಹುಲ್ ಗಾಂಧಿ ಪ್ರಶ್ನೆ

Ramyashree GN

ನವದೆಹಲಿ: ಅದಾನಿ ಗ್ರೂಪ್‌ನಲ್ಲಿ ಜನರ ನಿವೃತ್ತಿ ನಿಧಿಯ ಹೂಡಿಕೆಯ ಬಗ್ಗೆ ಹಲವಾರು ಆರೋಪಗಳು ಕೇಳಿಬಂದಿದ್ದರೂ, ಏಕೆ ತನಿಖೆ ನಡೆಸಲಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, 'ಎಲ್‌ಐಸಿಯ ಬಂಡವಾಳ, ಅದಾನಿಗೆ!. ಎಸ್‌ಬಿಐ ಬಂಡವಾಳ, ಅದಾನಿಗೆ!. ಇಪಿಎಫ್‌ಒ ಬಂಡವಾಳವೂ ಅದಾನಿಗೆ! 'ಮೋದಾನಿ' ಬಹಿರಂಗಗೊಂಡ ನಂತರವೂ ಸಾರ್ವಜನಿಕರ ನಿವೃತ್ತಿ ಹಣವನ್ನು ಅದಾನಿ ಕಂಪನಿಗಳಲ್ಲಿ ಏಕೆ ಹೂಡಿಕೆ ಮಾಡಲಾಗುತ್ತಿದೆ?' ಎಂದು ಕೇಳಿದ್ದಾರೆ.

'ಪ್ರಧಾನ ಮಂತ್ರಿಗಳೇ, ತನಿಖೆ ಇಲ್ಲ, ಉತ್ತರವಿಲ್ಲ! ಯಾಕೆ ಇಷ್ಟೊಂದು ಭಯ' ಎಂದು ರಾಹುಲ್ ಗಾಂಧಿ ಹಿಂದಿಯಲ್ಲಿ ಟ್ವೀಟ್‌ ಮಾಡಿದ್ದಾರೆ.

ಕಳೆದ ತಿಂಗಳು ಅಮೆರಿಕ ಮೂಲದ ಹಿಂಡೆನ್‌ಬರ್ಗ್ ರಿಸರ್ಚ್ ಮೋಸದ ವಹಿವಾಟುಗಳು ಮತ್ತು ಷೇರು-ಬೆಲೆಯ ಮ್ಯಾನಿಪುಲೇಶನ್ ಸೇರಿದಂತೆ ಹಲವಾರು ಆರೋಪಗಳನ್ನು ಮಾಡಿದ ನಂತರ ಅದಾನಿ ಗ್ರೂಪ್ ಷೇರುಗಳ ಮೌಲ್ಯ ತೀವ್ರವಾಗಿ ಕುಸಿಯಿತು. ಬಳಿಕ ಪ್ರಮುಖ ರಾಜಕೀಯ ಪಕ್ಷಗಳ ಕೆಸರೆರೆಚಾಟಕ್ಕೆ ಕಾರಣವಾಯಿತು.

ಗೌತಮ್ ಅದಾನಿ ನೇತೃತ್ವದ ಗ್ರೂಪ್ ಈ ಆರೋಪಗಳನ್ನು ಸುಳ್ಳು ಎಂದು ತಳ್ಳಿಹಾಕಿದೆ. ಅಲ್ಲದೆ, ಈ ಸಂಬಂಧ ಎಲ್ಲಾ ಕಾನೂನು ರೀತಿಯ ಕ್ರಮಗಳನ್ನು ಕೈಗೊಳ್ಳುತ್ತದೆ ಎಂದು ಹೇಳಿದೆ.

ಅದಾನಿ ವಿಚಾರದಲ್ಲಿ ರಾಹುಲ್ ಗಾಂಧಿ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. ಅದಾನಿ ವಿಷಯದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದರಿಂದ ಲೋಕಸಭೆಯಿಂದ ಅನರ್ಹಗೊಳಿಸಲಾಗಿದೆ. ಆದರೆ, ಸಂಸತ್ತಿನಿಂದ ಆಜೀವ ಅನರ್ಹಗೊಂಡರೂ ಅದನ್ನು ಮುಂದುವರಿಸುವುದಾಗಿ ಅವರು ಪ್ರತಿಪಾದಿಸಿದ್ದಾರೆ.

ಸೂರತ್ ನ್ಯಾಯಾಲಯದಿಂದ ಮಾನನಷ್ಟ ಮೊಕದ್ದಮೆಯಲ್ಲಿ ಎರಡು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾದ ನಂತರ ಮಾಜಿ ಕಾಂಗ್ರೆಸ್ ಮುಖ್ಯಸ್ಥರನ್ನು ಶುಕ್ರವಾರ ಲೋಕಸಭೆಯಿಂದ ಅನರ್ಹಗೊಳಿಸಲಾಯಿತು.

SCROLL FOR NEXT