ದೇಶ

ಮಾನನಷ್ಟ ಮೊಕದ್ದಮೆ ಪ್ರಕರಣ: ಉದ್ಧವ್ ಠಾಕ್ರೆ, ಆದಿತ್ಯ ಠಾಕ್ರೆಗೆ ಕೋರ್ಟ್ ಸಮನ್ಸ್

Lingaraj Badiger

ನವದೆಹಲಿ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣದ ನಾಯಕ ಮತ್ತು ಸಂಸದ ರಾಹುಲ್ ರಮೇಶ್ ಶೆವಾಲೆ ಅವರು ದಾಖಲಿಸಿರುವ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಉದ್ಧವ್ ಠಾಕ್ರೆ ಮತ್ತು ಅವರ ಪುತ್ರ ಆದಿತ್ಯ ಠಾಕ್ರೆ ಅವರಿಗೆ ದೆಹಲಿ ಹೈಕೋರ್ಟ್ ಮಂಗಳವಾರ ಸಮನ್ಸ್ ಜಾರಿ ಮಾಡಿದೆ.

ಇದೇ ಪ್ರಕರಣದಲ್ಲಿ ಠಾಕ್ರೆ ಬಣದ ಶಿವಸೇನಾ ನಾಯಕ ಸಂಜಯ್ ರಾವತ್ ಅವರಿಗೂ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.

ಉದ್ಧವ್ ಠಾಕ್ರೆ, ಆದಿತ್ಯ ಠಾಕ್ರೆ ಮತ್ತು ಸಂಜಯ್ ರಾವತ್ ಅವರು ಶಿಂಧೆ ಬಣದ ವಿರುದ್ಧ ಮಾಡಿದ ಭ್ರಷ್ಟಾಚಾರದ ಆರೋಪಕ್ಕೆ ಸಂಬಂಧಿಸಿದಂತೆ ರಾಹುಲ್ ಶೆವಾಲೆ ಅವರು ಮಾನನಷ್ಟ ಮೊಕದ್ದಮೆ ಪ್ರಕರಣ ದಾಖಲಿಸಿದ್ದಾರೆ.

ಮಾನನಷ್ಟ ಮೊಕದ್ದಮೆಯ ಪ್ರಕಾರ, ಏಕನಾಥ್ ಶಿಂಧೆ ಬಣ ಶಿವಸೇನೆಯ ಮೂಲ ಚಿಹ್ನೆಯನ್ನು 2000 ಕೋಟಿ ರೂ.ಗೆ ಖರೀದಿಸಿದ್ದಾರೆ ಎಂದು ಸಂಜಯ್ ರಾವತ್ ಮತ್ತು ಠಾಕ್ರೆ ಅವರು ಆರೋಪಿಸಿದ್ದರು.

ಶೆವಾಲೆ ಅವರು ದಾಖಲಿಸಿರುವ ಮಾನನಷ್ಟ ಮೊಕದ್ದಮೆಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್‌ ನ್ಯಾಯಮೂರ್ತಿ ಪ್ರತೀಕ್ ಜಲನ್ ಅವರ ಪೀಠ, ಸಂಜಯ್ ರಾವತ್, ಉದ್ಧವ್ ಮತ್ತು ಆದಿತ್ಯ ಠಾಕ್ರೆ ಅವರಿಗೆ ಸಮನ್ಸ್ ಜಾರಿಗೊಳಿಸಿ, ತನ್ನ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುವಂತೆ ಸೂಚಿಸಿದೆ.

SCROLL FOR NEXT