ದೇಶ

ದೇಶವನ್ನು ಆಳುವುದು ಅವರ ಜನ್ಮಸಿದ್ಧ ಹಕ್ಕೆಂದು ರಾಹುಲ್ ಗಾಂಧಿ ನಂಬಿದ್ದಾರೆ: ಕೇಂದ್ರ ಸಚಿವ ಅಶ್ವಿನಿ ವೈಷ್ಣವ್

Ramyashree GN

ನವದೆಹಲಿ: ರಾಹುಲ್ ಗಾಂಧಿ ಅವರು ನಿರ್ದಿಷ್ಟ ಕುಟುಂಬದಲ್ಲಿ ಜನಿಸಿದ ಕಾರಣ ದೇಶವನ್ನು ಆಳುವುದು ಅವರ ಜನ್ಮಸಿದ್ಧ ಹಕ್ಕು ಎಂದು ನಂಬಿದ್ದಾರೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಬುಧವಾರ ದೂರಿದ್ದಾರೆ.

ಲೋಕಸಭೆಯಿಂದ ರಾಹುಲ್ ಗಾಂಧಿ ಅನರ್ಹಗೊಳಿಸಿರುವುದು ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಬಿಜೆಪಿ ಕೂಡ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಸಂಸ್ಥೆಗಳ ಮೇಲೆ ದಾಳಿ ನಡೆಸಿದ ಹಲವಾರು ನಿದರ್ಶನಗಳನ್ನು ಉಲ್ಲೇಖಿಸಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುತ್ತಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವರು, ಮಾಜಿ ಕಾಂಗ್ರೆಸ್ ಅಧ್ಯಕ್ಷರು ಎಲ್ಲಾ ಸಂಸ್ಥೆಗಳು ತಮ್ಮ ಕೆಳಗಿವೆ ಎಂದು ಭಾವಿಸುತ್ತಾರೆ. ಅದಕ್ಕಾಗಿಯೇ ಇತರ ಹಿಂದುಳಿದ ವರ್ಗಗಳನ್ನು 'ಅವಮಾನ' ಮಾಡಿದ್ದಕ್ಕಾಗಿ ನ್ಯಾಯಾಲಯ ನೀಡಿರುವ ಆದೇಶದಿಂದ ಮತ್ತು ನಂತರದ ಅನರ್ಹಗೊಳಿಸುವಿಕೆಯಿಂದ ಅವರು ಅಸಮಾಧಾನಗೊಂಡಿದ್ದಾರೆ ಎಂದರು.

'ತಾನು ಗಾಂಧಿ ಕುಟುಂಬದಲ್ಲಿ ಹುಟ್ಟಿದವನಾದ್ದರಿಂದ ಆಳುವುದು ತನ್ನ ಜನ್ಮಸಿದ್ಧ ಹಕ್ಕು ಎಂದು ಭಾವಿಸುತ್ತಾರೆ. ಅವರು ಹಕ್ಕಿನ ರಾಜಕೀಯ ಮಾಡುತ್ತಾರೆ ಮತ್ತು ತಾವು ಸಂವಿಧಾನ, ನ್ಯಾಯಾಲಯ ಮತ್ತು ಸಂಸತ್ತಿಗೂ ಮೇಲಿರುವುದಾಗಿ ತಮ್ಮನ್ನು ತಾವು ಪರಿಗಣಿಸುತ್ತಾರೆ' ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ನೇತೃತ್ವದ ಯುಪಿಎ ಅಧಿಕಾರದಲ್ಲಿದ್ದಾಗ ಕೇಂದ್ರ ಸಚಿವ ಸಂಪುಟವು ಅಂಗೀಕರಿಸಿದ ಸುಗ್ರೀವಾಜ್ಞೆಯನ್ನು ರಾಹುಲ್ ಗಾಂಧಿ ಹರಿದು ಹಾಕಿದ ಘಟನೆಯನ್ನು ಸಚಿವರು ಉಲ್ಲೇಖಿಸಿದರು ಮತ್ತು ಸೋನಿಯಾ ಗಾಂಧಿ ನೇತೃತ್ವದ ರಾಷ್ಟ್ರೀಯ ಸಲಹಾ ಮಂಡಳಿಯಲ್ಲಿ 'ಪಿಎಂಒ ಸಮಾನಾಂತರ' ಉಪಸ್ಥಿತಿಯ ವಿರುದ್ಧವೂ ವಿರೋಧ ಪಕ್ಷಕ್ಕೆ ತಿರುಗೇಟು ನೀಡಿದರು. 

ದೇಶದ ಅಭಿವೃದ್ಧಿಗಾಗಿ ಹೊಸ ಚೈತನ್ಯದೊಂದಿಗೆ ಕೆಲಸ ಮಾಡುತ್ತಿರುವ ಕೇಂದ್ರ ಸರ್ಕಾರದ ಮೇಲೆ ದಾಳಿ ಮಾಡುವ ಒಂದೇ ಗುರಿಯೊಂದಿಗೆ ಎಲ್ಲಾ ಭ್ರಷ್ಟರು ಒಗ್ಗೂಡಿದ್ದಾರೆ ಎಂದು ಅವರು ಹೇಳಿದರು.

SCROLL FOR NEXT