ದೇಶ

ಜಮ್ಮು-ಕಾಶ್ಮೀರ: ಕಥುವಾದಲ್ಲಿ ಪ್ರಬಲ ಸ್ಫೋಟ, ಸ್ಥಳದಲ್ಲಿ ಕಾರ್ಯಾಚರಣೆಗಿಳಿದ ಸೇನಾಪಡೆ

Manjula VN

ಕಥುವಾ (ಜಮ್ಮು-ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರದ ಹೀರಾನಗರದಲ್ಲಿ ಬುಧವಾರ ರಾತ್ರಿ ಪ್ರಬಲ ಸ್ಫೋಟ ಸಂಭವಿಸಿದ್ದು, ಸ್ಫೋಟದ ತೀವ್ರತೆಗೆ ಸ್ಥಳೀಯ ಜನತೆ ಬೆಚ್ಚಿ ಬಿದ್ದಿದೆ.

ಜಮ್ಮು ಮತ್ತು ಕಾಶ್ಮೀರದ ಹಿರಾನಗರದ (ಕತುವಾ) ಸನ್ಯಾಲ್‌ನಲ್ಲಿರುವ ಭಾರತ-ಪಾಕ್ ಗಡಿಗಿಂತ ನಾಲ್ಕು ಕಿಲೋಮೀಟರ್ ಮೊದಲು ಗಡಿ ಪೊಲೀಸ್ ಪೋಸ್ಟ್ ಬಳಿಯ ಅರಣ್ಯ ಪ್ರದೇಶದಲ್ಲಿ ಈ ಸ್ಫೋಟ ಸಂಭವಿಸಿದೆ ಎಂದು ತಿಳಿದುಬಂದಿದೆ.

ಸ್ಫೋಟ ಹಿನ್ನೆಲೆಯಲ್ಲಿ ಎಸ್‌ಎಸ್‌ಪಿ ಶಿವದೀಪ್ ಸಿಂಗ್ ಜಮ್ವಾಲ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ತಪಾಸಣೆ ನಡೆಸುತ್ತಿದ್ದಾರೆ. ಸ್ಫೋಟ ಯಾವ ರೀತಿ ಸಂಭವಿಸಿದೆ ಎಂಬುದಕ್ಕೆ ಸ್ಪಷ್ಟ ಮಾಹಿತಿಗಳು ಲಭ್ಯವಾಗಿಲ್ಲ. ಈ ನಿಟ್ಟಿನಲ್ಲಿ ತನಿಖೆ ಮುಂದುವರೆದಿದೆ ಎಂದು ತಿಳಿದುಬಂದಿದೆ.

ಸ್ಫೋಟ ಸಂಭವಿಸಿದ ಸ್ಥಳದಲ್ಲಿ ದೊಡ್ಡ ಕುಳಿ ನಿರ್ಮಾಣವಾಗಿದೆ. ಸಮೀಪದಲ್ಲೇ ಸೇತುವೆಯೂ ಇದ್ದು, ಸುತ್ತಮುತ್ತಲಿನ ಹೊಲಗಳಲ್ಲಿ ಬೆಳೆ ಬೆಳೆಯಲಾಗಿದೆ. ಮೂಲಗಳ ಪ್ರಕಾರ, ಇದು ಐಇಡಿಯಂತೆ ಸ್ಫೋಟವೆಂದು ಹೇಳಲಾಗುತ್ತಿದ್ದು, ಈ ಮಾಹಿತಿಗಳ ಬಗ್ಗೆ ಅಧಿಕಾರಿಗಳು ಸ್ಪಷ್ಟನೆ ನೀಡಿಲ್ಲ.

ಈ ನಡುವೆ ಸ್ಫೋಟ ಸಂಭವಿಸಿದ ಸ್ಥಳಕ್ಕೆ ಭಾರತೀಯ ಸೇನಾಪಡೆ ಭೇಟಿ ನೀಡಿದ್ದು, ಕಾರ್ಯಾಚರಣೆ ವೇಳೆ ಲೈವ್ ಗ್ರೆನೇಡ್ ವೊಂದನ್ನು ವಶಪಡಿಸಿಕೊಂಡಿದೆ ಎಂದು ವರದಿಗಳು ತಿಳಿಸಿವೆ.

SCROLL FOR NEXT