ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ತನ್ನ ಮೂರನೇ ಪೂರಕ ಆರೋಪಪಟ್ಟಿಯಲ್ಲಿ ಎಎಪಿ ನಾಯಕರಾದ ಸಂಜಯ್ ಸಿಂಗ್ ಮತ್ತು ರಾಘವ್ ಚಡ್ಡಾ ಅವರನ್ನು ಹೆಸರನ್ನು ನಮೂದಿಸಿದೆ.
ಇಬ್ಬರೂ ನಾಯಕರು ರಾಜ್ಯಸಭಾ ಸದಸ್ಯರು. ಚಾರ್ಜ್ ಶೀಟ್ ನಲ್ಲಿ ಅವರ ಹೆಸರನ್ನಷ್ಟೇ ನಮೂದಿಸಲಾಗಿದೆ. ಆದರೆ ಅವರನ್ನು ಪ್ರಕರಣದಲ್ಲಿ ಆರೋಪಿ ಎಂದು ತೋರಿಸಿಲ್ಲ. ಇಡಿ ಪೂರಕ ಆರೋಪ ಪಟ್ಟಿಯನ್ನು ಇತ್ತೀಚೆಗೆ ರೋಸ್ ಅವೆನ್ಯೂ ಜಿಲ್ಲಾ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.
ಚಾರ್ಜ್‌ಶೀಟ್ ಪ್ರಕಾರ, ಮದ್ಯ ನೀತಿ ವಿಷಯದ ಕುರಿತು ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಚಡ್ಡಾ ಭಾಗವಹಿಸಿದ್ದರು ಎಂದು ಆರೋಪಿ ಉದ್ಯಮಿ ದಿನೇಶ್ ಅರೋರಾ ಹೇಳಿಕೆ ಬಳಿಕ ಇಡಿ ಅವರ ಹೆಸರನ್ನು ಸೇರಿಸಿದೆ.
ಆರಂಭದಲ್ಲಿ ಸಂಜಯ್ ಸಿಂಗ್ ಅವರನ್ನು ದಿನೇಶ್ ಅರೋರಾ ಭೇಟಿಯಾಗಿದ್ದರು ಎಂದು ಇಡಿ ಉಲ್ಲೇಖಿಸಿದೆ. ಅವರ ಮೂಲಕ ಮನೀಶ್ ಸಿಸೋಡಿಯಾ ಅವರ ಸಂಪರ್ಕಕ್ಕೆ ಬಂದರು. ಸಂಜಯ್ ಸಿಂಗ್ ಅವರ ಕೋರಿಕೆಯ ಮೇರೆಗೆ ಅವರು ಹಲವಾರು ರೆಸ್ಟೊರೆಂಟ್ ಮಾಲೀಕರೊಂದಿಗೆ ಮಾತನಾಡಿದರು.
ದೆಹಲಿಯಲ್ಲಿ ಮುಂಬರುವ ವಿಧಾನಸಭೆ ಚುನಾವಣೆಗೆ ಪಕ್ಷದ ನಿಧಿ ಸಂಗ್ರಹಕ್ಕಾಗಿ 82 ಲಕ್ಷ ರೂಪಾಯಿಯನ್ನು ಸಿಸೋಡಿಯಾಗೆ ಹಸ್ತಾಂತರಿಸಲಾಗಿದೆ ಎಂದು ದಿನೇಶ್ ಅರೋರಾ ಹೇಳಿರುವುದಾಗಿ ಇಡಿ ಉಲ್ಲೇಖಿಸಿದೆ.