ದೇಶ

ಜಮ್ಮು ಮತ್ತು ಕಾಶ್ಮೀರದಲ್ಲಿ ಕಾರ್ಯಾಚರಣೆ ವೇಳೆ ಭಯೋತ್ಪಾದಕರಿಂದ ಸ್ಫೋಟ; ಐವರು ಯೋಧರು ಹುತಾತ್ಮ

Ramyashree GN

ರಜೌರಿ: ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ದಟ್ಟ ಕಂಡಿ ಅರಣ್ಯದಲ್ಲಿ ಶುಕ್ರವಾರ ಭಯೋತ್ಪಾದಕರನ್ನು ಹೊಡೆದುರುಳಿಸಲು ನಡೆಸಿದ ಕಾರ್ಯಾಚರಣೆ ವೇಳೆ ಉಗ್ರರು ನಡೆಸಿದ ಸ್ಫೋಟದಲ್ಲಿ ಐವರು ಸೇನಾ ಸಿಬ್ಬಂದಿ ಸಾವಿಗೀಡಾಗಿದ್ದಾರೆ ಮತ್ತು ಮೇಜರ್ ಶ್ರೇಣಿಯ ಅಧಿಕಾರಿ ಸೇರಿದಂತೆ ಎಂಟು ಅಧಿಕಾರಿಗಳು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶುಕ್ರವಾರ ಬೆಳಿಗ್ಗೆ 7.30 ರ ಸುಮಾರಿಗೆ, ಸೇನಾ ತಂಡವು ಗುಹೆಯಲ್ಲಿದ್ದ ಭಯೋತ್ಪಾದಕರ ಗುಂಪಿನೊಂದಿಗೆ ಸಂಘರ್ಷಕ್ಕಿಳಿಯಿತು. 'ಭಯೋತ್ಪಾದಕರು ಪ್ರತೀಕಾರವಾಗಿ ಸ್ಫೋಟಕ ಸಾಧನವನ್ನು ಎಸೆದರು. ಈ ಪ್ರದೇಶವು ಕಲ್ಲು ಮತ್ತು ಕಡಿದಾದ ಬಂಡೆಗಳು ಹಾಗೂ ದಟ್ಟವಾದ ಸಸ್ಯಗಳಿಂದ ಕೂಡಿದೆ.

ಬೆಳಗ್ಗೆ ಲಭ್ಯವಾದ ಮಾಹಿತಿ ಪ್ರಕಾರ, ವಿಶೇಷ ಪಡೆಗಳಿಗೆ ಸೇರಿದ ಇಬ್ಬರು ಸೈನಿಕರು ಸ್ಫೋಟದಲ್ಲಿ ಹುತಾತ್ಮರಾಗಿದ್ದರು ಮತ್ತು ಮೇಜರ್ ಸೇರಿದಂತೆ ನಾಲ್ವರು ಗಾಯಗೊಂಡಿದ್ದರು. ನಂತರ, ಮೂವರು ಉಧಂಪುರದ ಆಸ್ಪತ್ರೆಯಲ್ಲಿ ಹುತಾತ್ಮರಾಗಿದ್ದಾರೆ.

ರಜೌರಿ ಸೆಕ್ಟರ್‌ನಲ್ಲಿ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ, ಬೆಳಿಗ್ಗೆ ತೀವ್ರವಾಗಿ ಗಾಯಗೊಂಡ ಮೂವರು ಯೋಧರು ದುರದೃಷ್ಟವಶಾತ್ ಸಾವನ್ನಪ್ಪಿದ್ದಾರೆ. ಕಾರ್ಯಾಚರಣೆಗಳು ಇನ್ನೂ ಪ್ರಗತಿಯಲ್ಲಿವೆ ಎಂದು ಉಧಂಪುರದ ಸೇನಾ ವಕ್ತಾರರು ತಿಳಿಸಿದ್ದಾರೆ.

ರಾಜೌರಿ ಪ್ರದೇಶದಲ್ಲಿ ಮೊಬೈಲ್ ಇಂಟರ್ನೆಟ್ ಸೌಲಭ್ಯಗಳನ್ನು ಸ್ಥಗಿತಗೊಳಿಸಲಾಗಿದೆ.

ಬೆಳಗ್ಗೆ ಸೇನೆಯ ಉತ್ತರ ಕಮಾಂಡ್‌ನ ಹೇಳಿಕೆಯ ಪ್ರಕಾರ, ಕಳೆದ ತಿಂಗಳು ಜಮ್ಮು ಪ್ರದೇಶದ ಭಾಟಾ ಧುರಿಯನ್‌ನ ತೋಟಾ ಗಲಿ ಪ್ರದೇಶದಲ್ಲಿ ಸೇನಾ ಟ್ರಕ್‌ನ ಮೇಲೆ ನಡೆಸಿದ ದಾಳಿಯಲ್ಲಿ ಭಾಗಿಯಾಗಿರುವ ಭಯೋತ್ಪಾದಕರ ಗುಂಪನ್ನು ಹೊಡೆದುರುಳಿಸಲು ಸೇನಾ ಸಿಬ್ಬಂದಿ ಗುಪ್ತಚರ ಆಧಾರಿತ ಮಾಹಿತಿ ಮೇರೆಗೆ ಕಾರ್ಯಾಚರಣೆಗಳನ್ನು ನಡೆಸುತ್ತಿದ್ದಾರೆ.

ರಜೌರಿ ಸೆಕ್ಟರ್‌ನ ಕಂಡಿ ಅರಣ್ಯದಲ್ಲಿ ಭಯೋತ್ಪಾದಕರಿರುವ ಬಗ್ಗೆ ನಿರ್ದಿಷ್ಟ ಮಾಹಿತಿ ಮೇರೆಗೆ ಮೇ 3 ರಂದು ಜಂಟಿ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು.

ಎನ್‌ಕೌಂಟರ್ ನಡೆದ ಸ್ಥಳಕ್ಕೆ ಸುತ್ತಮುತ್ತಲಿನ ಹೆಚ್ಚುವರಿ ತಂಡಗಳನ್ನು ನಿಯೋಜಿಸಲಾಗಿದೆ. 'ಭಯೋತ್ಪಾದಕ ಗುಂಪಿನಲ್ಲಿ ಸಾವುನೋವುಗಳು ಸಂಭವಿಸುವ ಸಾಧ್ಯತೆಯಿದೆ.

SCROLL FOR NEXT