ದೇಶ

ಕಿಂಗ್ ಚಾರ್ಲ್ಸ್ III ಪಟ್ಟಾಭಿಷೇಕಕ್ಕೆ ರಾಣಿ ಕ್ಯಾಮಿಲ್ಲಾ ಧರಿಸುವ ಬಟ್ಟೆ ವಿನ್ಯಾಸ ಮಾಡಿದ್ದು ಪಶ್ಚಿಮ ಬಂಗಾಳ ಮಹಿಳೆ!

Sumana Upadhyaya

ಕೋಲ್ಕತ್ತಾ: ಇಂದು ಮೇ 6 ಶನಿವಾರ ಇಂಗ್ಲೆಂಡಿನ ಕಿಂಗ್ ಚಾರ್ಲ್ಸ್ III ಗೆ ವೆಸ್ಟ್ ಮಿನ್ ಸ್ಟರ್ ಅಬ್ಬೆಯಲ್ಲಿ ಅದ್ದೂರಿ ಪಟ್ಟಾಭಿಷೇಕ ಕಾರ್ಯಕ್ರಮ ನೆರವೇರುತ್ತಿದೆ. ಈ ಸಮಯದಲ್ಲಿ ರಾಜ-ರಾಣಿ ತೊಡುವ ಉಡುಪು, ಆಭರಣ ಎಲ್ಲರ ಗಮನ ಸೆಳೆಯುತ್ತದೆ.

ಬ್ರಿಟನ್ ರಾಣಿ ಕ್ಯಾಮಿಲ್ಲಾ ಇಂದು ಧರಿಸುತ್ತಿರುವ ಬಟ್ಟೆಗೂ ಭಾರತಕ್ಕೂ ಸಂಬಂಧವಿದೆ. ಕಾರಣ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಗ್ರಾಮವೊಂದರ ಮಹಿಳಾ ಫ್ಯಾಶನ್ ಡಿಸೈನರ್ ಬ್ರಿಟಿಷ್ ರಾಣಿ ಕ್ಯಾಮಿಲ್ಲಾಗೆ ಉಡುಗೆ ಮತ್ತು ಕಿಂಗ್ ಚಾರ್ಲ್ಸ್ III ಗೆ ಬ್ರೂಚ್ ನ್ನು ವಿನ್ಯಾಸಗೊಳಿಸಿದ್ದಾರೆ. ಬ್ರಿಟನ್ ರಾಜಮನೆತನದಿಂದ ಅವರಿಗೆ ಅಭಿನಂದನೆ ಸಿಕ್ಕಿರುವುದು ಮಾತ್ರವಲ್ಲದೆ ಇಂದಿನ ಸಮಾರಂಭಕ್ಕೆ ಆಹ್ವಾನ ಕೂಡ ಸಿಕ್ಕಿದೆ. 

ಲಂಡನ್‌ನ ವೆಸ್ಟ್‌ಮಿನ್‌ಸ್ಟರ್ ಅಬ್ಬೆಯಲ್ಲಿ ನಡೆಯಲಿರುವ ಪಟ್ಟಾಭಿಷೇಕದ ಸಂದರ್ಭದಲ್ಲಿ ರಾಜ ಮತ್ತು ರಾಣಿ ಕ್ರಮವಾಗಿ ಬ್ರೂಚ್ ಮತ್ತು ಡ್ರೆಸ್‌ಗಳನ್ನು ಧರಿಸುತ್ತಾರೆ ಎಂದು 29 ವರ್ಷದ ಫ್ಯಾಷನ್ ಡಿಸೈನರ್ ಪ್ರಿಯಾಂಕಾ ಮಲ್ಲಿಕ್ ಹೇಳಿದ್ದಾರೆ. ರಾಣಿ ಮತ್ತು ರಾಜರು ನನ್ನ ಉಡುಗೆ ಮತ್ತು ಬ್ರೂಚ್ ವಿನ್ಯಾಸಗಳನ್ನು ಮೆಚ್ಚಿದ್ದಾರೆಂದು ನನಗೆ ಅಚ್ಚರಿ ಮತ್ತು ಅತೀವ ಸಂತೋಷವಾಯಿತು. ಅವರಿಂದ ಮೆಚ್ಚುಗೆಯ ಪತ್ರವನ್ನು ಸ್ವೀಕರಿಸಿದಾಗ ರೋಮಾಂಚನಗೊಂಡೆ. ಬಕಿಂಗ್ಹ್ಯಾಮ್ ಅರಮನೆಯಿಂದ ಒಂದು ಇಮೇಲ್ ಬಂತು ಎಂದು ಮಲ್ಲಿಕ್ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದರು. 

ಮಲ್ಲಿಕ್ ಹೂಗ್ಲಿ ಜಿಲ್ಲೆಯ ಸಿಂಗೂರ್ ರೈಲು ನಿಲ್ದಾಣದಿಂದ ಸುಮಾರು 12 ಕಿಮೀ ದೂರದಲ್ಲಿರುವ ಬಡಿನಾನ್ ಗ್ರಾಮದ ನಿವಾಸಿ. ಅನಾರೋಗ್ಯ ಕಾರಣದಿಂದ ಇಂದು ಸಮಾರಂಭಕ್ಕೆ ಅವರು ಹೋಗುತ್ತಿಲ್ಲ. 

"ನನಗೆ ಆರೋಗ್ಯವಾಗಿಲ್ಲದ ಕಾರಣ ಮನೆಯಿಂದ ಹೊರಗೆ ಹೋಗದಂತೆ ವೈದ್ಯರು ಸಲಹೆ ನೀಡಿದ್ದಾರೆ'' ಎಂದು ಹೇಳಿದರು. ಆದರೆ ಕೋಲ್ಕತ್ತಾದಲ್ಲಿರುವ ಬ್ರಿಟನ್ ಹೈ ಕಮಿಷನ್ ಕಚೇರಿಯಲ್ಲಿ ಕುಳಿತು ಕಾರ್ಯಕ್ರಮ ವೀಕ್ಷಿಸಬಹುದಾಗಿದೆ. 

ಮಲ್ಲಿಕ್ ಗೆ ಡ್ರೆಸ್ ಡಿಸೈನ್ ಗೆ ಅವಕಾಶ ಸಿಕ್ಕಿದ್ದು ಹೇಗೆ?: ಬ್ರಿಟನ್ ರಾಜಮನೆತನದ ಪ್ರತಿನಿಧಿಗಳು ಪ್ರಿಯಾಂಕಾ ಮಲ್ಲಿಕ್ ಅವರನ್ನು ಸಂಪರ್ಕಿಸಿ ಕೇಳಿಕೊಂಡಾಗ ರಾಣಿಯವರಿಗೆ ಡ್ರೆಸ್ ವಿನ್ಯಾಸ ಮಾಡಲು ಬಯಕೆ ವ್ಯಕ್ತಪಡಿಸಿದರಂತೆ. ಉಡುಪಿನ ವಿನ್ಯಾಸ ಮಾಡಿ ಕಳುಹಿಸಿದಾಗ ಅದನ್ನು ಮೆಚ್ಚಿ ಪತ್ರ ಬಂದಿತಂತೆ. 

12ನೇ ತರಗತಿ ಮುಗಿಸಿ ಪ್ರಿಯಾಂಕಾ ಮಲ್ಲಿಕ್ ಇಟಲಿಯ ಮಿಲಾನ್ ಯೂನಿವರ್ಸಿಟಿಯಲ್ಲಿ ಫ್ಯಾಶನ್ ಡಿಸೈನ್ ಕೋರ್ಸ್ ನಲ್ಲಿ ಆನ್ ಲೈನ್ ನಲ್ಲಿ ಪದವಿ ಗಳಿಸಿದರು. ಅದೇ ವಿವಿಯಿಂದ ಫ್ಯಾಶನ್ ಡಿಸೈನ್ ನಲ್ಲಿ ಸ್ನಾತಕೋತ್ತರ ಪದವಿ ಕೂಡ ಪೂರ್ಣಗೊಳಿಸಿದರು. 

2019 ರಲ್ಲಿ ಇಟಲಿಯ ಮಿಲಾನ್‌ನಲ್ಲಿ ಇಂಟರ್ನ್ಯಾಷನಲ್ ಫ್ಯಾಶನ್ ಡಿಸೈನರ್ ಮ್ಯಾರಥಾನ್, 2020 ರಲ್ಲಿ ಇಟಲಿಯ ಮಿಲಾನ್‌ನಲ್ಲಿ ವರ್ಷದ ಫ್ಯಾಷನ್ ಸ್ಟೈಲಿಸ್ಟ್ ಮತ್ತು 2022 ರಲ್ಲಿ ಭಾರತದಲ್ಲಿ ರಿಯಲ್ ಸೂಪರ್ ವುಮೆನ್ ಪ್ರಶಸ್ತಿಯನ್ನು ಗೆದ್ದಿದ್ದೇನೆ" ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. 

ರಾಜನ ಪಟ್ಟಾಭಿಷೇಕ ಸಂದರ್ಭದ ಉಡುಗೆ ಬಗ್ಗೆ ಬ್ರಿಟನ್ ಸರ್ಕಾರದ ವೆಬ್ ಸೈಟ್ ನಲ್ಲಿ ಕೂಡ ಪ್ರಕಟವಾಗಲಿದೆ.

SCROLL FOR NEXT