ದೇಶ

ಸಹಜ ಸ್ಥಿತಿಗೆ ಮರಳಿದ ಮಣಿಪುರ, ಕರ್ಫ್ಯೂ ಸಡಿಲಿಕೆ

Lingaraj Badiger

ಇಂಫಾಲ್: ಕಳೆದ ಕೆಲವು ದಿನಗಳಿಂದ ರಕ್ತಸಿಕ್ತ ಜನಾಂಗೀಯ ಗಲಭೆಗೆ ಸಾಕ್ಷಿಯಾಗಿದ್ದ ಮಣಿಪುರದಲ್ಲಿ ಭಾನುವಾರ ಕರ್ಫ್ಯೂ ಸಡಿಲಿಸಲಾಗಿದ್ದು, ಸೇನಾ ಡ್ರೋನ್‌ಗಳ ವೈಮಾನಿಕ ಕಾವಲು ಮತ್ತು ಹೆಲಿಕಾಪ್ಟರ್‌ಗಳ ಕಾವಲು ಅಡಿಯಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ.

ಗಲಭೆ ಪೀಡಿತ ಚುರಚಂದ್‌ಪುರ ಪಟ್ಟಣದಲ್ಲಿ ಇಂದು ಬೆಳಗ್ಗೆ 7 ರಿಂದ 10 ಗಂಟೆಯವರೆಗೆ ಕರ್ಫ್ಯೂ ಸಡಿಲಿಕೆ ಮಾಡಲಾಗಿದ್ದು, ಈ ಅವಧಿಯಲ್ಲಿ ಜನ ಆಹಾರ, ಔಷಧಿಗಳು ಮತ್ತು ಇತರ ಅಗತ್ಯ ವಸ್ತುಗಳನ್ನು ಖರೀದಿಸಲು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದು ಕಂಡುಬಂದಿದೆ.

ಬೆಳಗ್ಗೆ 10 ಗಂಟೆಗೆ ಕರ್ಫ್ಯೂ ಸಡಿಲಿಕೆ ಮುಗಿದ ತಕ್ಷಣ ಸೇನೆ ಮತ್ತು ಅಸ್ಸಾಂ ರೈಫಲ್ಸ್ ಪಡೆ ಪಟ್ಟಣದಲ್ಲಿ ಧ್ವಜ ಮೆರವಣಿಗೆ ನಡೆಸಿದವು. ಇಡೀ ಗಲಭೆ ಪೀಡಿತ ರಾಜ್ಯದಲ್ಲಿ ಸುಮಾರು 120-125 ಸೇನಾ ಪಡೆಗಳನ್ನು ನಿಯೋಜಿಸಲಾಗಿದೆ.

ಮಣಿಪುರದಲ್ಲಿ ಸುಮಾರು 10,000 ಸೈನಿಕರು, ಪ್ಯಾರಾ ಮಿಲಿಟರಿ ಮತ್ತು ಕೇಂದ್ರ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಶಾಂತಿ ಸ್ಥಾಪನೆಗೆ ಸಂಬಂಧಿಸಿದ ಉಪಕ್ರಮಗಳನ್ನು ತಳಮಟ್ಟದಲ್ಲಿ ಅನುಷ್ಠಾನಗೊಳಿಸುವುದಕ್ಕಾಗಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಶಾಂತಿ ಸಮಿತಿಗಳನ್ನು ರಚಿಸಲಾಗುವುದು ಎಂದು ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಹೇಳಿದ್ದಾರೆ.

SCROLL FOR NEXT