ದೇಶ

ಲೈಂಗಿಕ ಕಿರುಕುಳ ಪ್ರಕರಣ: ಬ್ರಿಜ್ ಭೂಷಣ್ ವಿರುದ್ಧ ಕ್ರಮಕ್ಕೆ 15 ದಿನಗಳ ಗಡುವು ವಿಧಿಸಿದ ಖಾಪ್

Lingaraj Badiger

ನವದೆಹಲಿ: ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಪ್ರಾಧಿಕಾರದ (ಡಬ್ಲ್ಯುಎಫ್‌ಐ) ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ವಿರುದ್ಧ 15 ದಿನದಲ್ಲಿ ಕ್ರಮ ತೆಗೆದುಕೊಳ್ಳಬೇಕು ಎಂದು ಖಾಪ್ ಗಳು  ಗಡುವು ನೀಡಿದ್ದಾರೆ.

ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳು ಮತ್ತು ಖಾಪ್ ಪಂಚಾಯತ್‌ಗಳಿಗೆ ಸಲಹೆ ನೀಡುತ್ತಿರುವ 31 ಸದಸ್ಯರ ಸಮಿತಿಯು ಬ್ರಿಜ್ ಭೂಷಣ್ ವಿರುದ್ಧ ಕ್ರಮಕ್ಕೆ 15 ದಿನಗಳ ಗಡುವು ನೀಡಿದ್ದು, ಒಂದು ವೇಳೆ ಕ್ರಮ ಕೈಗೊಳ್ಳದಿದ್ದಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.

ಖಾಪ್‌ಗಳು, ಕುಸ್ತಿಪಟುಗಳು ಮತ್ತು ರೈತ ಸಂಘಗಳೊಂದಿಗೆ ನಡೆದ ಸಭೆಯಲ್ಲಿ, ಆರೋಪಿ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಕ್ರಮ ಕೈಗೊಳ್ಳಲು ನಾವು ಮೇ 21 ರವರೆಗೆ ಕಾಲಾವಕಾಶ ನೀಡಿದ್ದೇವೆ. ಒಂದು ವೇಳೆ ಕ್ರಮ ತೆಗೆದುಕೊಳ್ಳದಿದ್ದರೆ ನಾವು ಮತ್ತೊಮ್ಮೆ ಸಭೆ ನಡೆಸುತ್ತೇವೆ ಮತ್ತು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ಪಾಲಂ ಖಾಪ್ ನ ದೆಹಲಿ ಮುಖ್ಯಸ್ಥ ಸುರೇಂದ್ರ ಸೋಲಂಕಿ ಹೇಳಿದ್ದಾರೆ.

ಒಲಿಂಪಿಕ್ ಪದಕ ವಿಜೇತರಾದ ಬಜರಂಗ್ ಪುನಿಯಾ, ಸಾಕ್ಷಿ ಮಲಿಕ್ ಹಲವು ಭಾರತದ ಅಗ್ರ ಕುಸ್ತಿಪಟುಗಳು ಡಬ್ಲ್ಯುಎಫ್‌ಐ ಮುಖ್ಯಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಏಪ್ರಿಲ್ 23 ರಿಂದ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಭಾನುವಾರ, ಹರಿಯಾಣ, ರಾಜಸ್ಥಾನ ಮತ್ತು ಪಶ್ಚಿಮ ಉತ್ತರ ಪ್ರದೇಶದ ಸುಮಾರು 250 ಖಾಪ್‌ಗಳ ಪ್ರತಿನಿಧಿಗಳು, ನೂರಾರು ರೈತರೊಂದಿಗೆ ಜಂತರ್ ಮಂತರ್ ಗೆ ಆಗಮಿಸಿದ್ದು, ಕುಸ್ತಿಪಟುಗಳಿಗೆ ಬೆಂಬಲ ನೀಡಿದ್ದಾರೆ.

SCROLL FOR NEXT