ದೇಶ

ಅಕ್ರಮವಾಗಿ ಇ-ಟಿಕೆಟ್ ಕಾಯ್ದಿರಿಸಲು ಬಳಸುತ್ತಿದ್ದ ಸಾಫ್ಟ್ ವೇರ್ ವಶಕ್ಕೆ ಪಡೆದ ರೈಲ್ವೆ

Srinivas Rao BV

ನವದೆಹಲಿ: ಭಾರತೀಯ ರೈಲ್ವೆ ಆಸನಗಳನ್ನು ಕಾಯ್ದಿರಿಸುವ ವಿಷಯದಲ್ಲಿ ಹೆಚ್ಚಿನ ಬೇಡಿಕೆಯನ್ನು ಹೊಂದಿದ್ದರೆ, ಇದನ್ನೇ ಬಂಡವಾಳವಾಗಿಸಿಕೊಂಡ ಕೆಲವರು ಅಕ್ರಮ ಸಾಫ್ಟ್ ವೇರ್ ಗಳನ್ನು ಬಳಸಿಕೊಂಡು ರೈಲ್ವೆ ಟಿಕೆಟ್ ಕಾಯ್ದಿರಿಸುವ ದಂಧೆಯಲ್ಲಿ ತೊಡಗಿದ್ದರು ಈ ಸಾಫ್ಟ್ ವೇರ್ ಗಳನ್ನು ರೈಲ್ವೆ ಇಲಾಖೆ ವಶಕ್ಕೆ ಪಡೆದಿದೆ.
 
ಕೋವಿಡ್-X, ಕೋವಿಡ್-19, ಆನ್ಮ್ ಬ್ಯಾಕ್, ಬ್ಲ್ಯಾಕ್ ಟೈಗರ್, ರೆಡ್-ಮಿರ್ಚಿ ಮತ್ತು ರಿಯಲ್-ಮ್ಯಾಂಗೋ ಮುಂತಾದ ಸಾಫ್ಟ್ ವೇರ್ ಗಳನ್ನು ಕ್ಷಿಪ್ರಗತಿಯಲ್ಲಿ ಟಿಕೆಟ್ ಕಾಯ್ದಿರಿಸುವುದಕ್ಕಾಗಿ ಬಳಕೆ ಮಾಡಲಾಗುತ್ತಿತ್ತು.

ಈ ಸಾಫ್ಟ್ ವೇರ್ ಗಳು ರೂ 50000 ರಿಂದ 2 ಲಕ್ಷದ ವರೆಗೂ ಲಭ್ಯವಿದ್ದು, ಲ್ಯಾಪ್ ಟಾಪ್ ಗಳಲ್ಲಿ ಇದನ್ನು ಇನ್ಸ್ಟಾಲ್ ಮಾಡಿ, ದೀರ್ಘಾವಧಿಯ ಪ್ರಯಾಣಕ್ಕೆ ದೃಢೀಕೃತ ರೈಲ್ವೆ ಟಿಕೆಟ್ ಗಳನ್ನು ತತ್ಕಾಲ್ ಕೋಟಾದ ಅಡಿ ಕಾಯ್ದಿರಿಸಲು ಬಳಕೆ ಮಾಡುತ್ತಿದ್ದರು.

ಈ ರೀತಿಯ ಜಾಲದ ವಿರುದ್ಧ ಕಾರ್ಯಾಚರಣೆ ನಡೆಸಿರುವ ರೈಲ್ವೆ ರಕ್ಷಣಾ ಪಡೆ ( ಆರ್ ಪಿಎಫ್) ದೇಶಾದ್ಯಂತ ಹಲವೆಡೆ ಪೈರೆಟೆಡ್ ಸಾಫ್ಟ್ ವೇರ್ ನ್ನು ವಶಕ್ಕೆ ಪಡೆದಿದೆ. 

ರೈಲ್ವೆ ಅಧಿಕಾರಿಗಳು ಮಾಧ್ಯಮಗಳಿಗೆ ನೀಡಿರುವ ಮಾಹಿತಿಯ ಪ್ರಕಾರ, 30 ದಿನಗಳ ವಿಶೇಷ ಕಾರ್ಯಾಚರಣೆಯಲ್ಲಿ 42 ಅಕ್ರಮ ಸಾಫ್ಟ್ ವೇರ್ ಗಳನ್ನು ವಶಕ್ಕೆ ಪಡೆಯಲಾಗಿದ್ದು ಇದರಲ್ಲಿ ವ್ಯವಹರಿಸುತ್ತಿದ್ದ 955 ಮಂದಿಯನ್ನು ಬಂಧಿಸಿದ್ದಾರೆ. 

ರೈಲುಗಳಿಗೆ ಕಲ್ಲು ತೂರಾಟ ಮಾಡುತ್ತಿದ್ದ ಹಾಗೂ ಇ ಟಿಕೆಟ್ ಗಳನ್ನು ಅಕ್ರಮವಾಗಿ ಕಾಯ್ದಿರಿಸುತ್ತಿದ್ದ ಜಾಲದ ವಿರುದ್ಧ ಆರ್ ಪಿಎಫ್ ಕಾರ್ಯಾಚರಣೆ ಕೈಗೊಂಡಿತ್ತು. ಅಕ್ರಮವಾಗಿ ಟಿಕೆಟ್ ಕಾಯ್ದಿರಿಸುತ್ತಿದ್ದಕ್ಕೆ ಪ್ರಯಾಣಿಕರಿಂದ ದುಬಾರಿ ಮೊತ್ತದ ಹಣ ಪಡೆಯಲಾಗುತ್ತಿತ್ತು ಎಂಬ ಮಾಹಿತಿ ಬಹಿರಂಗವಾಗಿದೆ.

ಈ ಸಾಫ್ಟ್ ವೇರ್ ಗಳು ಅಕ್ರಮ ಟಿಕೆಟ್ ಬುಕಿಂಗ್ ಗೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ನಕಲಿ ಐಪಿ ವಿಳಾಸ ಐಡಿಗಳ ಸೃಷ್ಟಿಗೆ ಸಹಕರಿಸುತ್ತಿದ್ದವು ಇದರಿಂದ ಹೆಚ್ಚು ಟಿಕೆಟ್ ಗಳನ್ನು ಕಾಯ್ದಿರಿಸಲು ಸಾಧ್ಯವಾಗುತ್ತಿತ್ತು, ಕಳೆದ ಕೆಲವು ವರ್ಷಗಳಲ್ಲಿ ರೈಲ್ವೆ ಇಂತಹ 150 ಕ್ಕೂ ಹೆಚ್ಚಿನ ಸಾಫ್ಟ್ ವೇರ್ ಗಳನ್ನು ವಶಕ್ಕೆ ಪಡೆದಿದೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.

SCROLL FOR NEXT