ದೇಶ

ಬಿಜೆಪಿ ವಿರುದ್ಧ ಹೋರಾಟಕ್ಕೆ ಪ್ರತಿಪಕ್ಷಗಳನ್ನು ಒಗ್ಗೂಡಿಸಲು ಶರದ್ ಪವಾರ್, ನಿತೀಶ್ ಕುಮಾರ್ ಪ್ಲಾನ್

Nagaraja AB

ಮುಂಬೈ: ಎನ್ ಸಿಪಿ ನಾಯಕ ಶರದ್ ಪವಾರ್ ಗುರುವಾರ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಭೇಟಿಯಾಗಿ ಮಾತುಕತೆ ನಡೆಸಿದರು. ದೇಶದ ಹಿತದೃಷ್ಟಿಯಿಂದ ಪ್ರತಿಪಕ್ಷಗಳು ಒಗ್ಗೂಡಬೇಕಾದ ಅಗತ್ಯವಿದೆ ಎಂದು ಉಭಯ ನಾಯಕರು ಪ್ರತಿಪಾದಿಸಿದರು. 

ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶರದ್ ಪವಾರ್, ದೇಶದಲ್ಲಿನ ಪರಿಸ್ಥಿತಿ ಮತ್ತು ಪ್ರಜಾಪ್ರಭುತ್ವ ಕಾಪಾಡುವ ನಿಟ್ಟಿನಲ್ಲಿ ಒಟ್ಟಾಗಿ ಕೆಲಸ ಮಾಡಬೇಕಾದ ಅಗತ್ಯವಿದೆ. ದೇಶದ ಪರಿಸ್ಥಿತಿ ನೋಡಿದ ನಂತರ ಒಟ್ಟಾಗಿ ಕೆಲಸ ಮಾಡಿದರೆ, ದೇಶಕ್ಕೆ ಅಗತ್ಯವಾದ ಪರ್ಯಾಯಕ್ಕೆ ನೆರವಾಗಲಿದೆ. ಕರ್ನಾಟಕದ ಚುನಾವಣೆಯಲ್ಲಿ ಜನರು ಬಿಜೆಪಿ ತಿರಸ್ಕರಿಸಿ, ಜಾತ್ಯತೀತ ಸರ್ಕಾರವನ್ನು ರಚಿಸಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ ಎಂದರು.

ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ನಿತೀಶ್ ಕುಮಾರ್, ವಿರೋಧ ಪಕ್ಷಗಳ ಸಂಖ್ಯೆ ಹೆಚ್ಚಾದಷ್ಟೂ ರಾಷ್ಟ್ರದ ಹಿತಾಸಕ್ತಿ ಉತ್ತಮವಾಗಿರುತ್ತದೆ. ಹಲವು ರಾಜಕೀಯ ಪಕ್ಷಗಳೊಂದಿಗೆ ಮಾತನಾಡಿದ್ದೇವೆ. ನಾವು ಒಟ್ಟಿಗೆ ಕುಳಿತು ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು. 

ಶರದ್ ಪವಾರ್ ಅವರು ಪ್ರತಿಪಕ್ಷಗಳ ಮೈತ್ರಿಕೂಟದ ನಾಯಕರಾಗುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಬಿಹಾರ ಸಿಎಂ, ಅದಕ್ಕಿಂತ ಸಂತೋಷಕರವಾದದ್ದು ಬೇರೊಂದಿಲ್ಲ. ಅವರು ತಮ್ಮ ಪಕ್ಷಕ್ಕಾಗಿ ಮಾತ್ರವಲ್ಲದೆ ಇಡೀ ದೇಶಕ್ಕಾಗಿ ಬಲವಾಗಿ ಕೆಲಸ ಮಾಡಬೇಕು ಎಂದು ಅವರಿಗೆ ಹೇಳಿದ್ದೇನೆ ಎಂದರು. 

ನಂತರ ನಿತೀಶ್ ಕುಮಾರ್ ಬಿಹಾರದ ಉಪಮುಖ್ಯಮಂತ್ರಿ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರೊಂದಿಗೆ ಮುಂಬೈನ 'ಮಾತೋಶ್ರೀ'ಯಲ್ಲಿ ಉದ್ಧವ್ ಠಾಕ್ರೆ ಅವರನ್ನು ಭೇಟಿಯಾದರು.2024 ರ ಲೋಕಸಭೆ ಚುನಾವಣೆಗೆ ಮುನ್ನ ಬಿಜೆಪಿ ವಿರುದ್ಧ ಬಣವನ್ನು ಬಲಪಡಿಸಲು ಜೆಡಿಯು ನಾಯಕ ನಿತೀಶ್ ಕುಮಾರ್ ವಿರೋಧ ಪಕ್ಷದ ನಾಯಕರನ್ನು ಭೇಟಿಯಾಗುತ್ತಿದ್ದಾರೆ.

SCROLL FOR NEXT