ದೇಶ

2ನೇ ಬಾರಿ ಹಾಸನ ಲೋಕಸಭೆಯಿಂದ ಪ್ರಜ್ವಲ್ ರೇವಣ್ಣ ಸ್ಪರ್ಧೆ: ಹೆಚ್ ಡಿ ರೇವಣ್ಣ

Srinivas Rao BV

ಹಾಸನ: ಹಾಸನದ ಹಾಲಿ ಸಂಸದ ಪ್ರಜ್ವಲ್ ರೇವಣ್ಣ 2024 ರ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂದು ಜೆಡಿಎಸ್  ನಾಯಕ ಹೆಚ್ ಡಿ ರೇವಣ್ಣ ಹೇಳಿದ್ದಾರೆ. 

ಮಾಧ್ಯಮಗಳೊಂದಿಗೆ ಮಾತನಾಡಿದ ರೇವಣ್ಣ, ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಸಹ ದಕ್ಷಿಣ ಕರ್ನಾಟಕದ ಯಾವುದಾದರೂ ಒಂದು ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂದು ಮಾಹಿತಿ ನೀಡಿದ್ದಾರೆ.

ಹೊಳೆನರಸಿಪುರದ ಶಾಸಕರೂ ಆಗಿರುವ ಹೆಚ್ ಡಿ ರೇವಣ್ಣ, ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ವಿಚಾರವಾಗಿ ಜೆಡಿಎಸ್ ಕಾರ್ಯಕರ್ತರು ಹೆಚ್ ಡಿ ದೇವೇಗೌಡರನ್ನು ಮೌನವಾಗಿರುವುದಕ್ಕೆ ಬಿಡುವುದಿಲ್ಲ ಎಂದು ಹೇಳಿದ್ದಾರೆ. ಇನ್ನು 15 ದಿನಗಳಲ್ಲಿ ಪಕ್ಷದ ಶಾಸಕರು, ಮಾಜಿ ಶಾಸಕರು, ಪರಾಭವಗೊಂಡ ಶಾಸಕರ ಸಭೆ ದೇವೇಗೌಡರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಹೇಳಿದ್ದಾರೆ.

ಹಾಸನದಲ್ಲಿಯೂ ಹೋಬಳಿ ಮಟ್ಟದಲ್ಲಿ ಕಾರ್ಯಕರ್ತರ ಸಭೆ ನಡೆಸಲಾಗುವುದು ಈ ಸಭೆಗಳಲ್ಲಿ ಪಕ್ಷವನ್ನು ತಳಮಟ್ಟದಿಂದ ಬಲಪಡಿಸಲು ಅಗತ್ಯವಿರುವ ಕಾರ್ಯತಂತ್ರದ ಬಗ್ಗೆ ಚರ್ಚೆ ಮಾಡಲಾಗುತ್ತದೆ ಎಂದು ರೇವಣ್ಣ ತಿಳಿಸಿದ್ದಾರೆ.

ಸೋಲು, ಗೆಲುವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಜೆಡಿಎಸ್ ಫಲಿತಾಂಶದಿಂದ ಎಂದಿಗೂ ಹತಾಶವಾಗಿಲ್ಲ. ಜೆಡಿಎಸ್ ಮುಂದಿನ ಸಂಸತ್ ಚುನಾವಣೆ, ಜಿಲ್ಲಾ ಪಂಚಾಯತ್ ಚುನಾವಣೆಯನ್ನು ವಿಶ್ವಾಸದಿಂದ ಎದುರಿಸುತ್ತದೆ ಎಂದು ರೇವಣ್ಣ ಹೇಳಿದ್ದಾರೆ.

ರೇವಣ್ಣ ಅವರು ಮಾದರಿ ಜಿಲ್ಲೆಯ ಕನಸು ಹೊಂದಿದ್ದು, ತಮ್ಮ ರಾಜಕೀಯ ಜೀವನದ ಅಂತ್ಯಕ್ಕೂ ಮುನ್ನ ಅದನ್ನು ಜಾರಿ ಮಾಡುವುದಾಗಿ ಹೇಳಿದರು. ಜೆಡಿಎಸ್ ಅನ್ನು ರಾಜಕೀಯದಿಂದ ದೂರವಿಡಲು ವ್ಯರ್ಥ ಪ್ರಯತ್ನ ನಡೆಸುತ್ತಿರುವ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ಮೇಲೆ ತೀವ್ರವಾಗಿ ವಾಗ್ದಾಳಿ ನಡೆಸಿದ ಅವರು, ಎರಡೂ ಪಕ್ಷಗಳಿಗೆ ಜೆಡಿಎಸ್ ಪಕ್ಷದ ಭದ್ರ ಬುನಾದಿಯನ್ನು ಅಲುಗಾಡಿಸಲು ಸಾಧ್ಯವಿಲ್ಲ.  ಜೆಡಿಎಸ್  ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ಹೇಳಿದ್ದಾರೆ. 

SCROLL FOR NEXT