ದೇಶ

100 ಅಡಿ ಎತ್ತರದ ತಾಳೆ ಮರದ ಮೇಲೇರಿ ಅಲ್ಲೇ ಮಲಗಿದ ವ್ಯಕ್ತಿ, ಅಮಲಿನಲ್ಲಿದ್ದ ವ್ಯಕ್ತಿಯನ್ನು ರಕ್ಷಿಸಿದ ಪೊಲೀಸರು

Ramyashree GN

ಕೊಯಮತ್ತೂರು: ಭಾನುವಾರ ತಡರಾತ್ರಿ ಪೊಲ್ಲಾಚಿಯಲ್ಲಿ 100 ಅಡಿ ಎತ್ತರದ ರಸ್ತೆ ಬದಿಯ ತಾಳೆ ಮರವೊಂದರ ಮೇಲೆ ಹತ್ತಿ ಮಲಗಿದ್ದವರನ್ನು ಅಗ್ನಿಶಾಮಕ ಸಿಬ್ಬಂದಿ ಕ್ರೇನ್ ಸಹಾಯದಿಂದ ರಕ್ಷಿಸಿದ್ದಾರೆ.

ಅನೈಮಲೈ ಸಮೀಪದ ಸೆಮ್ಮನಾಮಪತಿ ಗ್ರಾಮದ ಕೆ ಲಕ್ಷ್ಮಣನ್ (42) ಕೂಲಿ ಕಾರ್ಮಿಕನಾಗಿದ್ದು, ತಾಟಿಲಿಂಗು ಮತ್ತು ತೆಂಗಿನಕಾಯಿ ಕೀಳಲು ಮರಗಳನ್ನು ಏರುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಭಾನುವಾರ ಸಂಜೆ ಮತ್ತೇರಿದ ಸ್ಥಿತಿಯಲ್ಲಿ ತಾಳೆ ಮರಕ್ಕೆ ಹತ್ತಿದ್ದಾರೆ ಮತ್ತು ಮರದ ಮೇಲೆಯೇ ನಿದ್ದೆಗೆ ಜಾರಿದ್ದಾರೆ. ಅವರು ಮರದ ಎಲೆಗಳನ್ನು ಒಂದಕ್ಕೊಂದು ಹೆಣೆಯುವ ಮೂಲಕ ಮಲಗಲು ಆರಾಮದಾಯಕವಾದ ಜಾಗವನ್ನು ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲ್ಲಾಚಿ ಬಳಿಯ ಜಾಮಿನ್ ಕೊಟ್ಟಂಪಟ್ಟಿ ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಮರದ ತುದಿಯಿಂದ ವಿಚಿತ್ರ ಶಬ್ದಗಳು ಹೊರಡುತ್ತಿರುವುದನ್ನು ಕೇಳಿದ ನಂತರ ಮರದ ಮೇಲೆ ವ್ಯಕ್ತಿಯೊಬ್ಬ ಇರುವುದನ್ನು ಕಂಡಿದ್ದಾರೆ. ವ್ಯಕ್ತಿ ಕುಡಿದ ಅಮಲಿನಲ್ಲಿ ಬೊಬ್ಬೆ ಹೊಡೆಯುತ್ತಿದ್ದ. ಆತನನ್ನು ಕೆಳಗಿಳಿಸಲು ನಡೆಸಿದ ಯತ್ನ ವಿಫಲವಾದ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಕೊಟ್ಟೂರು ಪೋಲೀಸ್ ತಂಡ ಧ್ವನಿವರ್ಧಕದ ಮೂಲಕ ಮಾತನಾಡಿ ಆತನನ್ನು ಎಚ್ಚರಗೊಳಿಸಲು ಯತ್ನಿಸಿದ್ದಾರೆ.
ಅವರ ಮಾತುಕತೆ ವಿಫಲವಾದ ನಂತರ, ಪೊಲೀಸರು ಆತನನ್ನು ರಕ್ಷಿಸಲು ನಿರ್ಧರಿಸಿದ್ದಾರೆ. ಮರದಿಂದ ಕೆಳಗೆ ಇಳಿಯುವಾಗ ಆತ ಬೀಳುವ ಸಾಧ್ಯತೆ ಇದ್ದದ್ದರಿಂದ, ಪೊಲೀಸರು ಪೊಲ್ಲಾಚಿ ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳ ಇಲಾಖೆ ಸಿಬ್ಬಂದಿಯ ಸಹಾಯವನ್ನು ಕೋರಿದ್ದಾರೆ. 

'ಆರಂಭದಲ್ಲಿ, ನಾವು ಹಗ್ಗಗಳನ್ನು ಬಳಸಿ ಆತನನ್ನು ಕೆಳಗಿಳಿಸಲು ಯೋಜಿಸಿದ್ದೆವು. ಸುರಕ್ಷತೆಗಾಗಿ ಕೆಳಗೆ ಬಲೆಯನ್ನೂ ಹಾಕಲಾಗಿತ್ತು. ಆದರೆ ವ್ಯಕ್ತಿಯ ದೈಹಿಕ ಸ್ಥಿತಿ ಮತ್ತು ಅಪಾಯಗಳನ್ನು ಪರಿಗಣಿಸಿ ಯೋಜನೆಯನ್ನು ಕೈಬಿಡಲಾಯಿತು' ಎಂದು ಅಗ್ನಿಶಾಮಕ ಸುರಕ್ಷತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಳಿಕ ಕ್ರೇನ್ ಮೂಲಕ 100 ಅಡಿ ಎತ್ತರದ ಮರದ ಮೇಲಿದ್ದ ವ್ಯಕ್ತಿಯನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

SCROLL FOR NEXT