ದೇಶ

ವಿಮಾನದ ಶೌಚಾಲಯದಲ್ಲಿ ಧೂಮಪಾನ ಮಾಡಿದ್ದಕ್ಕಾಗಿ ಆಕಾಶ ಏರ್ ಪ್ರಯಾಣಿಕನ ಬಂಧನ

Ramyashree GN

ನವದೆಹಲಿ: ಅಹಮದಾಬಾದ್‌ನಿಂದ ಬೆಂಗಳೂರಿಗೆ ತೆರಳುತ್ತಿದ್ದ ಆಕಾಶ ಏರ್ ವಿಮಾನದಲ್ಲಿನ ಪ್ರಯಾಣಿಕನೊಬ್ಬರು ವಿಮಾನದ ಶೌಚಾಲಯದಲ್ಲಿ ಧೂಮಪಾನ ಮಾಡುತ್ತಿದ್ದ ಕಾರಣ ಅವರನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.

'ಅಹಮದಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ಆಕಾಶ ಏರ್ ಫ್ಲೈಟ್ QP1326 ನಲ್ಲಿ ಪ್ರಯಾಣಿಕರೊಬ್ಬರು ವಿಮಾನದ ಶೌಚಾಲಯದಲ್ಲಿ ಧೂಮಪಾನ ಮಾಡುತ್ತಿರುವುದು ಕಂಡುಬಂದಿದೆ. ನಮ್ಮ ಸಿಬ್ಬಂದಿ ಅಗತ್ಯ ಸುರಕ್ಷತಾ ನಿಯಮಾವಳಿಗಳನ್ನು ಅನುಸರಿಸಿದರು ಮತ್ತು ಬೆಂಗಳೂರಿಗೆ ಬಂದಿಳಿದ ನಂತರ ಪ್ರಯಾಣಿಕರನ್ನು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಸಹಾಯದಿಂದ ಸ್ಥಳೀಯ ಪೊಲೀಸರಿಗೆ ಹಸ್ತಾಂತರಿಸಲಾಯಿತು. ಈ ವಿಷಯವನ್ನು ತನಿಖೆ ಮಾಡಲು ನಾವು ಅಧಿಕಾರಿಗಳಿಗೆ ಸಹಾಯ ಮಾಡುತ್ತಿದ್ದೇವೆ' ಎಂದು ಆಕಾಶ ಏರ್‌ನ ವಕ್ತಾರರು ಹೇಳಿದರು.

ಏಪ್ರಿಲ್‌ನಲ್ಲಿ, ದೆಹಲಿ-ಬೆಂಗಳೂರು ಇಂಡಿಗೋ ವಿಮಾನದ ತುರ್ತು ನಿರ್ಗಮನದ ಫ್ಲಾಪ್ ತೆರೆಯಲು ಯತ್ನಿಸಿದ ಆರೋಪದ ಮೇಲೆ 40 ವರ್ಷದ ಪಾನಮತ್ತ ಪ್ರಯಾಣಿಕನ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು ಎಂದು ಇಂಡಿಗೋ ಅಧಿಕೃತ ಪ್ರಕಟಣೆ ತಿಳಿಸಿದೆ.
ಪ್ರಕಟಣೆಯ ಪ್ರಕಾರ, ಇಂಧಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನ ಸಂಖ್ಯೆ 6E 308 ನಲ್ಲಿ ಈ ಘಟನೆ ನಡೆದಿದೆ.

'ವಿಮಾನ 6E 308 ರಲ್ಲಿ ದೆಹಲಿಯಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ಅಮಲೇರಿದ ಸ್ಥಿತಿಯಲ್ಲಿ ತುರ್ತು ನಿರ್ಗಮನದ ಫ್ಲಾಪ್ ಅನ್ನು ತೆರೆಯಲು ಪ್ರಯತ್ನಿಸಿದರು. ಇದನ್ನು ಗಮನಿಸಿದ ವಿಮಾನದಲ್ಲಿದ್ದ ಸಿಬ್ಬಂದಿ ಕ್ಯಾಪ್ಟನ್‌ ಗಮನಕ್ಕೆ ತಂದರು ಮತ್ತು ಪ್ರಯಾಣಿಕರಿಗೂ ಎಚ್ಚರಿಕೆ ನೀಡಲಾಯಿತು. ವಿಮಾನದ ಸುರಕ್ಷಿತ ಕಾರ್ಯಾಚರಣೆಯಲ್ಲಿ ಯಾವುದೇ ರಾಜಿ ಇಲ್ಲ' ಎಂದು ವಿಮಾನಯಾನ ಸಂಸ್ಥೆ ತಿಳಿಸಿವೆ.

ಬೆಂಗಳೂರಿಗೆ ಬಂದ ನಂತರ ಪ್ರಯಾಣಿಕರನ್ನು ಸಿಐಎಸ್‌ಎಫ್‌ಗೆ ಹಸ್ತಾಂತರಿಸಲಾಯಿತು. 

SCROLL FOR NEXT