ದೇಶ

ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಬಂಧನಕ್ಕೆ ಆಗ್ರಹ: ಮೇಣದ ಬತ್ತಿ ಹಿಡಿದು ಕುಸ್ತಿಪಟುಗಳ ಪ್ರತಿಭಟನೆ

Nagaraja AB

ನವದೆಹಲಿ: ಡಬ್ಲ್ಯುಎಫ್‌ಐ ಮುಖ್ಯಸ್ಥ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಬಂಧನಕ್ಕೆ ಆಗ್ರಹಿಸಿ ಕುಸ್ತಿಪಟುಗಳು ದೆಹಲಿಯ ಇಂಡಿಯಾ ಗೇಟ್‌ನಲ್ಲಿ ಮೇಣದ ಬತ್ತಿ ಹಿಡಿದು ಪ್ರತಿಭಟನೆ ನಡೆಸಿದರು. ಒಲಿಂಪಿಕ್ ಪದಕ ವಿಜೇತರಾದ ಬಜರಂಗ್ ಪುನಿಯಾ, ಸಾಕ್ಷಿ ಮಲ್ಲಿಕ್ ಮತ್ತು ಕಾಮನ್ ವೆಲ್ತ್ ಗೇಮ್ಸ್ ನ ಚಿನ್ನದ ಪದಕ ವಿಜೇತ ವಿನೇಶ್ ಫೋಗಟ್  ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಅಪಾರ ಸಂಖ್ಯೆಯ ಜನರು ಪಾಲ್ಗೊಂಡರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಬಜರಂಗ್ ಫುನಿಯಾ, ಬ್ರಿಜ್ ಭೂಷಣ್ ಬಂಧನಕ್ಕೆ ಒತ್ತಾಯಿಸಿದರು.  ಜಂತರ್ ಮಂತರ್‌ನಲ್ಲಿ ಒಂದು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳು, ಆರೋಪಿ ವಿರುದ್ಧ ಹೆಚ್ಚಿನ ಬೆಂಬಲ ಗಳಿಸಲು  ಅದನ್ನು ಇಂಡಿಯಾ ಗೇಟ್‌ಗೆ ಕೊಂಡೊಯ್ದರು. ಬಹಳಷ್ಟು ಜನರು ತಮ್ಮ ಕೈಯಲ್ಲಿ ಮೇಣದ ಬತ್ತಿಗಳು ಮತ್ತು ತ್ರಿವರ್ಣ ಧ್ವಜ ಹಿಡಿಯುವುದರೊಂದಿಗೆ ಕುಸ್ತಿಪಟುಗಳೊಂದಿಗೆ ಪ್ರತಿಭಟನೆಯಲ್ಲಿ ಭಾಗವಹಿಸಿದರು. 

ಬ್ರಿಜ್ ಭೂಷಣ್ ಶರಣ್ ಸಿಂಗ್ ಮೇಲೆ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪವಿದೆ. ಆದಾಗ್ಯೂ, ಅವರು ನಿರಂತರವಾಗಿ ಆರೋಪ ನಿರಾಕರಿಸುತ್ತಾ ಬಂದಿದ್ದು, ಕುಸ್ತಿಪಟುಗಳ ಪ್ರತಿಭಟನೆಯನ್ನು ರಾಜಕೀಯ ಪ್ರೇರಿತ ಘಟನೆ ಎನ್ನುತ್ತಿದ್ದಾರೆ. ಮತ್ತೊಂದೆಡೆ ಕುಸ್ತಿಪಟುಗಳು ತಮ್ಮ ಬೇಡಿಕೆಗೆ ಪಟ್ಟು ಹಿಡಿದು ಹಗಲು ರಾತ್ರಿ ಬೀದಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. 

ಇದೇ ಸಂದರ್ಭದಲ್ಲಿ ಮಾತನಾಡಿದ ವಿನೇಶ್ ಫೋಗಟ್, ಮೇ 28 ರಂದು ಹೊಸ ಸಂಸತ್  ಕಟ್ಟಡದ ಮುಂಭಾಗದಲ್ಲಿ ಶಾಂತಿಯುತ ಮಹಿಳಾ ಮಹಾ ಪಂಚಾಯತ್  ನಡೆಸುವುದಾಗಿ ಘೋಷಿಸಿದರು. 

SCROLL FOR NEXT