ದೇಶ

ಶನಿವಾರ ಕೇಜ್ರಿವಾಲ್- ತೆಲಂಗಾಣ ಸಿಎಂ ಭೇಟಿ, ದೆಹಲಿ ಸೇವಾ ಸುಗ್ರೀವಾಜ್ಞೆ ಬಗ್ಗೆ ಚರ್ಚೆ ಸಾಧ್ಯತೆ

Srinivas Rao BV

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶನಿವಾರ ಹೈದರಾಬಾದ್‌ನಲ್ಲಿ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರನ್ನು ಭೇಟಿಯಾಗಲಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಸೇವೆಗಳ ನಿಯಂತ್ರಣದ ಕುರಿತು ಕೇಂದ್ರದ ಸುಗ್ರೀವಾಜ್ಞೆಯನ್ನು ವಿರೋಧಿಸಲು ಭಾರತ ರಾಷ್ಟ್ರ ಸಮಿತಿಯ ಬೆಂಬಲವನ್ನು ಕೋರಲಿದ್ದಾರೆ.

ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕರೂ ಆಗಿರುವ ಕೇಜ್ರಿವಾಲ್, ಸುಗ್ರೀವಾಜ್ಞೆಗೆ ವಿರುದ್ಧವಾಗಿ ತಮ್ಮ ಬೆಂಬಲವನ್ನು ಪಡೆಯಲು ಬಿಜೆಪಿಯೇತರ ಪಕ್ಷಗಳ ನಾಯಕರನ್ನು ಸಂಪರ್ಕಿಸುತ್ತಿದ್ದಾರೆ. ಇದರಿಂದಾಗಿ ಮಸೂದೆ ಜಾರಿ ಮಾಡುವ ಕೇಂದ್ರದ ಯತ್ನ ವಿಫಲಗೊಳ್ಳುವಂತೆ ಮಾಡಲು ಕೇಜ್ರಿವಾಲ್ ಯತ್ನಿಸುತ್ತಿದ್ದಾರೆ.

 "ಗೌರವಾನ್ವಿತ ಸುಪ್ರೀಂ ಕೋರ್ಟ್‌ನ ಆದೇಶದ ವಿರುದ್ಧ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಅಸಂವಿಧಾನಿಕ ಮತ್ತು ಪ್ರಜಾಪ್ರಭುತ್ವ ವಿರೋಧಿ ಸುಗ್ರೀವಾಜ್ಞೆ ವಿರುದ್ಧ ಬೆಂಬಲ ಕೋರಲು ನಾಳೆ ಹೈದರಾಬಾದ್‌ನಲ್ಲಿ ತೆಲಂಗಾಣ ಸಿಎಂ ಅವರನ್ನು ಭೇಟಿಯಾಗುತ್ತೇನೆ" ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

ಈ ವಾರದ ಆರಂಭದಲ್ಲಿ ಅವರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ, ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಮತ್ತು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಭೇಟಿಯಾಗಿ ಈ ವಿಷಯದಲ್ಲಿ ಅವರ ಬೆಂಬಲವನ್ನು ಕೋರಿದ್ದರು. ಕೇಜ್ರಿವಾಲ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲು ಸಮಯ ಕೋರಿದ್ದಾರೆ.

SCROLL FOR NEXT