ದೇಶ

ದೆಹಲಿ ಮಾಜಿ ಸಚಿವ ಸತ್ಯೇಂದ್ರ ಜೈನ್ ಗೆ ಸುಪ್ರೀಂ ಕೋರ್ಟ್ ನಿಂದ 6 ವಾರಗಳ ಮಧ್ಯಂತರ ಜಾಮೀನು

Sumana Upadhyaya

ನವದೆಹಲಿ: ಆಮ್ ಆದ್ಮಿ ಪಾರ್ಟಿ ನಾಯಕ ದೆಹಲಿ ಸರ್ಕಾರದ ಮಾಜಿ ಸಚಿವ ಸತ್ಯೇಂದ್ರ ಜೈನ್ ಗೆ ಸುಪ್ರೀಂ ಕೋರ್ಟ್ ಶುಕ್ರವಾರ ಅನಾರೋಗ್ಯ ಕಾರಣ 6 ವಾರಗಳ ಷರತ್ತುಬದ್ಧ ಮಧ್ಯಂತರ ಜಾಮೀನು ನೀಡಿದೆ. 

ಸುಪ್ರೀಂ ಕೋರ್ಟ್ ನೀಡಿರುವ ಷರತ್ತುಬದ್ಧ ಜಾಮೀನು ಪ್ರಕಾರ, ಸತ್ಯೇಂದ್ರ ಜೈನ್ ದೆಹಲಿ ತೊರೆದು ಹೋಗುವಂತಿಲ್ಲ, ಮಾಧ್ಯಮಗಳ ಮುಂದೆ ಯಾವುದೇ ರೀತಿಯ ಹೇಳಿಕೆ ನೀಡುವಂತಿಲ್ಲ. 

ಕಳೆದ ವರ್ಷ ಮೇ 30ರಂದು ಜಾರಿ ನಿರ್ದೇಶನಾಲಯ ಸತ್ಯೇಂದ್ರ ಜೈನ್ ಅವರನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(PMLA) ಅಡಿ ಬಂಧಿಸಿತ್ತು. 

ಸತ್ಯೇಂದರ್ ಜೈನ್ ಅವರು ಫೆಬ್ರವರಿ 14, 2015 ರಿಂದ ಮೇ 31, 2017 ರವರೆಗೆ ವಿವಿಧ ವ್ಯಕ್ತಿಗಳ ಹೆಸರಿನಲ್ಲಿ ಚರ ಆಸ್ತಿಗಳನ್ನು ಸಂಪಾದಿಸಿದ್ದಾರೆ ಎಂಬ ಆರೋಪದ ಮೇಲೆ ಕೇಂದ್ರೀಯ ತನಿಖಾ ದಳ ಸಿಬಿಐ ದಾಖಲಿಸಿದ ದೂರಿನ ಆಧಾರದ ಮೇಲೆ ಇಡಿ ಪ್ರಕರಣ ದಾಖಲಿಸಿ ತನಿಖೆ ನಡೆಸಿತ್ತು. 

ತಲೆಸುತ್ತಿ ಬಂದು ಜೈಲಿನಲ್ಲಿ ಕುಸಿದು ಬಿದ್ದ ನಂತರ ಜೈಲಿನಲ್ಲಿರುವ ಆಪ್ ನಾಯಕ ಸತ್ಯೇಂದ್ರ ಜೈನ್ ನನ್ನು ನಿನ್ನೆ ದೆಹಲಿಯ ಸರ್ಕಾರಿ ಆಸ್ಪತ್ರೆಯ ಐಸಿಯುಗೆ ದಾಖಲಿಸಲಾಗಿತ್ತು. ಕಳೆದ ಒಂದು ವಾರದಲ್ಲಿ ಇದು ಎರಡನೇ ಬಾರಿಗೆ ಮಾಜಿ ಸಚಿವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಕಳೆದ ವರ್ಷ ಮೇನಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿಯಿಂದ ಜೈನ್ ಅವರನ್ನು ಬಂಧಿಸಿದಾಗಿನಿಂದ ತಿಹಾರ್ ಜೈಲಿನಲ್ಲಿದ್ದರು.

ಸತ್ಯೇಂದ್ರ ಜೈನ್ ತಿಹಾರ್ ಜೈಲಿನ ಸ್ನಾನಗೃಹದಲ್ಲಿ ಕುಸಿದು ಬಿದ್ದಿದ್ದರು. ಈ ಹಿಂದೆಯೂ ಸ್ನಾನಗೃಹದಲ್ಲಿ ಬಿದ್ದು ಬೆನ್ನುಮೂಳೆಗೆ ಗಂಭೀರ ಗಾಯವಾಗಿತ್ತು ಎಂದು ಆಪ್ ನಾಯಕರು ಹೇಳಿದ್ದರು.

SCROLL FOR NEXT