ದೇಶ

ಅಮಿತ್ ಶಾ ಭೇಟಿಗೂ ಮುನ್ನ ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: ಪೊಲೀಸರು ಸೇರಿ ಐವರ ಸಾವು, ಹಲವರಿಗೆ ಗಾಯ

Manjula VN

ಗುವಾಹಟಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭೇಟಿ ನೀಡಿಗೂ ಮುನ್ನ ಮಣಿಪುರದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಹಿಂಸಾಚಾರದಲ್ಲಿ ಐವರು ಜನರು ಸಾವನ್ನಪ್ಪಿದ್ದಾರೆಂದು ಸೋಮವಾರ ತಿಳಿದುಬಂದಿದೆ.

ಕಕ್ಚಿಂಗ್ ಜಿಲ್ಲೆಯ ಸುಗ್ನು ಎಂಬಲ್ಲಿ ನಾಲ್ವರು ನಾಗರಿಕರು ಮತ್ತು ಓರ್ವ ಪೊಲೀಸ್'ನನ್ನು ಹತ್ಯೆ ಮಾಡಲಾಗಿದ್ದು, ಇದರೊಂದಿಗೆ ಭಾನುವಾರ ಸಂಜೆಯವರೆಗೂ ಕನಿಷ್ಟ 40 ಮಂದಿ ಸಾವನ್ನಪ್ಪಿದ್ದಾರೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭೇಟಿಗೆ ಕೆಲವೇ ಗಂಟೆಗಳಿಗೆ ಮುನ್ನ ಹಿಂಸಾಚಾರ ನಡೆದಿದೆ. ಈ ನಡುವೇ ಕಳೆದ ನಾಲ್ಕು ದಿನಗಳಿಂದ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಕನಿಷ್ಠ 33 ಶಸ್ತ್ರಸಜ್ಜಿತ ಉಗ್ರರನ್ನು ಭದ್ರತಾ ಪಡೆಗಳು ಹತ್ಯೆ ಮಾಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇಂಫಾಲ್ ಪೂರ್ವ, ಬಿಷ್ಣುಪುರ್ ಮತ್ತು ಚುರಾಚಂದ್‌ಪುರ ಜಿಲ್ಲೆಗಳ ಗಡಿಯಲ್ಲಿನ ಪ್ರದೇಶಗಳಲ್ಲಿಯೂ ಹಿಂಸಾಚಾರ ಭುಗಿಲೆದ್ದಿದ್ದು, ಪರಿಸ್ಥಿತಿ ಉದ್ವಿಗ್ನವಾಗಿದೆ ಎಂದು ತಿಳಿದುಬಂದಿದೆ.

ಇಂಫಾಲ್ ಪಶ್ಚಿಮದ ಉರಿಪೋಕ್‌ನಲ್ಲಿ ಗುಂಪೊಂದು ಬಿಜೆಪಿ ಶಾಸಕ ಖ್ವೈರಕ್‌ಪಾಮ್ ರಘುಮಣಿ ಸಿಂಗ್ ಅವರ ಮನೆಗೆ ನುಗ್ಗಿ ಎರಡು ವಾಹನಗಳಿಗೆ ಬೆಂಕಿ ಹಚ್ಚಿರುವುದು ವರದಿಯಾಗಿದೆ.

ಶಾಂತಿಯನ್ನು ಮರುಸ್ಥಾಪಿಸುವ ಕಾರ್ಯತಂತ್ರಗಳನ್ನು ರೂಪಿಸಲು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಅವರು ಮಣಿಪುರ ರಾಜ್ಯಕ್ಕೆ ಭಾನುವಾರ ಭೇಟಿ ನೀಡಿದ್ದರು. ಈ ನಡುವಲ್ಲೇ ಹಿಂಸಾಚಾರ ಭುಗಿಲೆದ್ದಿದೆ.

ಈ ನಡುವೆ ಮನೋಜ್ ಪಾಂಡೆಯವರು ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರಿಗೆ ಭಾನುವಾರ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಿದರು.

ನಾಗರಿಕರ ಮೇಲೆ ದಾಳಿ ಮಾಡುತ್ತಿರುವ ಉಗ್ರಗಾಮಿಗಳ ಪತ್ತೆಗೆ ಯತ್ನಗಳು ಮುಂದುವರೆದಿದೆ. ಕಳೆದ ನಾಲ್ಕು ದಿನಗಳಿಂದ ನಡೆದ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಕನಿಷ್ಠ 33 ಶಸ್ತ್ರಸಜ್ಜಿತ ಉಗ್ರರನ್ನು ಭದ್ರತಾ ಪಡೆಗಳು ಹತ್ಯೆ ಮಾಡಿದೆ ಎಂದು ಬಿರೇನ್ ಸಿಂಗ್ ಅವರು ಮಾಹಿತಿ ನೀಡಿದ್ದಾರೆ.

ಭಯೋತ್ಪಾದಕರು ನಾಗರಿಕರ ವಿರುದ್ಧ M-16 ಮತ್ತು AK-47 ರೈಫಲ್‌ ಹಾಗೂ ಸ್ನೈಪರ್‌ ಗನ್‌ಗಳನ್ನ ಬಳಸಿ ದಾಳಿ ನಡೆಸಿದ್ದರು. ಅಲ್ಲದೇ ಮನೆಗಳಿಗೆ ಬೆಂಕಿ ಹಚ್ಚಲು ವಿವಿಧ ಗ್ರಾಮಗಳಿಗೆ ದಾಂಗುಡಿ ಇಟ್ಟಿದ್ದರು. ಅದಕ್ಕಾಗಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಬೇಕಾಯಿತು ಎಂದು ತಿಳಿಸಿದ್ದಾರೆ.

SCROLL FOR NEXT