ದೇಶ

ಸರ್ವಪಕ್ಷ ಸಭೆಯಲ್ಲಿ ಮರಾಠ ಮೀಸಲಾತಿಗೆ ಸರ್ವಾನುಮತದ ಒಪ್ಪಿಗೆ: ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ

Ramyashree GN

ಮುಂಬೈ: ಮುಂಬೈನಲ್ಲಿ ಬುಧವಾರ ನಡೆದ ಸರ್ವಪಕ್ಷ ಸಭೆಯಲ್ಲಿ ಮರಾಠಾ ಮೀಸಲಾತಿ ನೀಡಲು ಎಲ್ಲರೂ ಒಪ್ಪಿಗೆ ಸೂಚಿಸಿದ್ದಾರೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ತಿಳಿಸಿದ್ದಾರೆ.

ಸರ್ವಪಕ್ಷ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸರ್ವಪಕ್ಷ ಸಭೆಯಲ್ಲಿ ಮರಾಠಾ ಸಮುದಾಯಕ್ಕೆ ಮೀಸಲಾತಿ ನೀಡಬೇಕು ಎಂದು ಎಲ್ಲರೂ ಒಪ್ಪಿ, ಕಾನೂನಿನ ಚೌಕಟ್ಟಿನೊಳಗೆ ಮತ್ತು ಇತರ ಸಮುದಾಯಗಳಿಗೆ ಅನ್ಯಾಯವಾಗದಂತೆ ಮೀಸಲಾತಿ ನೀಡಬೇಕು ಎಂದು ತೀರ್ಮಾನಿಸಲಾಯಿತು' ಎಂದರು.

ಜನರು ಶಾಂತಿ ಕಾಪಾಡಬೇಕು ಮತ್ತು ಸರ್ಕಾರದ ಪ್ರಯತ್ನಗಳಿಗೆ ಸಹಕರಿಸಬೇಕು ಎಂದು ಮುಖ್ಯಮಂತ್ರಿಗಳು ಮನವಿ ಮಾಡಿದರು.

'ಮನೋಜ ಜಾರಂಗೆ ಪಾಟೀಲ್ ಅವರು ಸರ್ಕಾರದ ಪ್ರಯತ್ನದಲ್ಲಿ ನಂಬಿಕೆ ಇಡಬೇಕೆಂದು ನಾನು ವಿನಂತಿಸುತ್ತೇನೆ. ಈ ಪ್ರತಿಭಟನೆಯು ಹೊಸ ದಿಕ್ಕಿನತ್ತ ಸಾಗಲು ಪ್ರಾರಂಭಿಸಿದೆ. ರಾಜ್ಯದಲ್ಲಿ ನಡೆದಿರುವ ಮತ್ತು ನಡೆಯುತ್ತಿರುವ ಹಿಂಸಾಚಾರದ ಘಟನೆಗಳು ಅನ್ಯಾಯದಿಂದ ಕೂಡಿದ್ದು, ಹೋರಾಟಕ್ಕೆ ಕಳಂಕ ತರುತ್ತಿವೆ. ನಾವು ಈ ಘಟನೆಗಳನ್ನು ಬಲವಾಗಿ ತಿರಸ್ಕರಿಸುತ್ತೇವೆ. ಸಾಮಾನ್ಯ ಜನರು ಅಸುರಕ್ಷಿತ ಭಾವನೆ ಹೊಂದಬಾರದು. ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳಬೇಡಿ ಮತ್ತು ಶಾಂತಿ ಕಾಪಾಡಲು ಮತ್ತು ರಾಜ್ಯ ಸರ್ಕಾರದೊಂದಿಗೆ ಸಹಕರಿಸಲು ನಾನು ಎಲ್ಲರಿಗೂ ವಿನಂತಿಸುತ್ತೇನೆ' ಎಂದು ಶಿಂಧೆ ಹೇಳಿದರು.

ಸಹ್ಯಾದ್ರಿ ಅತಿಥಿ ಗೃಹದಲ್ಲಿ ಸರ್ವಪಕ್ಷ ಸಭೆಯಲ್ಲಿ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ವರಿಷ್ಠ, ಶರದ್ ಪವಾರ್, ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್, ಸಚಿವರಾದ ರಾಧಾಕೃಷ್ಣ ವಿಖೆ ಪಾಟೀಲ್, ಚಂದ್ರಕಾಂತ್ ದಾದಾ ಪಾಟೀಲ್, ಛಗನ್ ಭುಜಬಲ್, ದಿಲೀಪ್ ವಾಲ್ಸೆ ಪಾಟೀಲ್, ಗಿರೀಶ್ ಮಹಾಜನ್, ದಾದಾಜಿ ಭೂಸೆ ಸೇರಿದಂತೆ ಹಲವರು ಉಪಸ್ಥಿತರಿದ್ದರು. 

ಅವರಲ್ಲದೆ, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಅಂಬಾದಾಸ್ ದಾನ್ವೆ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿಜಯ ವಾಡೆತ್ತಿವಾರ್ ಮತ್ತು ಆಯಾ ಪಕ್ಷಗಳ ಹಲವಾರು ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು.

SCROLL FOR NEXT