ದೇಶ

‘ಐದು ರಾಜ್ಯಗಳ ವಿಧಾನಸಭೆ ಚುನಾವಣೆಯತ್ತ ಕಾಂಗ್ರೆಸ್ ಚಿತ್ತ; INDIA ದಲ್ಲಿ ಅಪಸ್ವರ’

Lingaraj Badiger

ಪಾಟ್ನಾ: ಪ್ರತಿಪಕ್ಷಗಳ ಮೈತ್ರಿಕೂಟ 'ಇಂಡಿಯಾ'ದಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಸುಳಿವು ನೀಡಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಮುಂಬರುವ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿರತವಾಗಿರುವುದರಿಂದ ಸೀಟು ಹಂಚಿಕೆಯಂತಹ ವಿಷಯಗಳಲ್ಲಿ ಯಾವುದೇ ಪ್ರಗತಿ ಕಂಡಿಲ್ಲ ಎಂದು ಗುರುವಾರ ಆರೋಪಿಸಿದ್ದಾರೆ.

ಪಾಟ್ನಾದಲ್ಲಿ ಸಿಪಿಐ ಆಯೋಜಿಸಿದ್ದ ‘ಬಿಜೆಪಿ ಹಟಾವೋ ದೇಶ್ ಬಚಾವೋ’ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ನಿತೀಶ್, 2024 ರ ಲೋಕಸಭೆ ಚುನಾವಣೆಗೆ ಪ್ರತಿಪಕ್ಷಗಳ ತಯಾರಿಯಲ್ಲಿನ ಕೊರತೆಗೆ ಕಾಂಗ್ರೆಸ್ ಅನ್ನು ದೂಷಿಸಿದರು.

ಸಾರ್ವತ್ರಿಕ ಚುನಾವಣೆಗೂ ಮುನ್ನ ಬಿಜೆಪಿ ವಿರುದ್ಧ ಪ್ರತಿಪಕ್ಷಗಳ ಮೈತ್ರಿಕೂಟ ಮುನ್ನಡೆಸುವ ಜವಾಬ್ದಾರಿಯನ್ನು ಕಾಂಗ್ರೆಸ್‌ಗೆ ನೀಡಲಾಗಿದೆ. ಆದರೆ ದೇಶದ ಅತ್ಯಂತ ಹಳೆಯ ಪಕ್ಷವು ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ತೊಡಗಿಸಿಕೊಂಡಿದೆ ಎಂದು ಬಿಹಾರ ಸಿಎಂ ತಿಳಿಸಿದ್ದಾರೆ.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಉತ್ತರ ನೀಡಲು ಬಿಜೆಪಿಯೇತರ ಪಕ್ಷಗಳನ್ನು ಒಗ್ಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಜೆಡಿಯು ನಾಯಕ, “ನಾವು ಅವರೊಂದಿಗೆ ಮಾತನಾಡುತ್ತಿದ್ದೇವೆ, ಅವರನ್ನು ಮುಂದಕ್ಕೆ ತಳ್ಳುತ್ತಿದ್ದೇವೆ. 'ಇಂಡಿಯಾ' ಮೈತ್ರಿಕೂಟದಲ್ಲಿ ಮುಂದೆ ಬರುವಂತೆ ಹೇಳುತ್ತಿದ್ದೇವೆ. ಆದರೆ ಹೆಚ್ಚಿನ ಪ್ರಗತಿ ಕಾಣುತ್ತಿಲ್ಲ ಎಂದು ನಿತೀಶ್ ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.

ಆದಾಗ್ಯೂ, ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ನಂತರ ಮುಂದಿನ ನಡೆಯನ್ನು ನಿರ್ಧರಿಸಲು ಪ್ರತಿಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ ಬಣದ ಪಕ್ಷಗಳು ಮತ್ತೊಮ್ಮೆ ಸಭೆ ಸೇರಲಿವೆ ಎಂದು ಅವರು ಬಿಹಾರ ಸಿಎಂ ಹೇಳಿದ್ದಾರೆ.

ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಹೋರಾಡಲು ಎಲ್ಲ ವಿರೋಧ ಪಕ್ಷಗಳನ್ನು ಒಂದೇ ವೇದಿಕೆಗೆ ತರಲು ಮುಂದಾಗಿದ್ದೇನೆ. ದೇಶದ ಇತಿಹಾಸವನ್ನೇ ಬದಲಿಸಲು ನರೇಂದ್ರ ಮೋದಿ ಸರ್ಕಾರ ಯತ್ನಿಸುತ್ತಿದೆ ಎಂದು ನಿತೀಶ್ ಕುಮಾರ್ ಆರೋಪಿಸಿದರು.

SCROLL FOR NEXT