ದೇಶ

ಕರ್ನಾಟಕ, ರಾಜಸ್ಥಾನ, ಹಿಮಾಚಲದಲ್ಲಿ ಕಾಂಗ್ರೆಸ್ ಸುಳ್ಳು ಭರವಸೆ ನೀಡಿದೆ: ಕೇಂದ್ರ ಸಚಿವ ಅನುರಾಗ್ ಠಾಕೂರ್

Ramyashree GN

ಭೋಪಾಲ್: ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಕೇಂದ್ರ ಸಚಿವ ಅನುರಾಗ್ ಠಾಕೂರ್, ಕಾಂಗ್ರೆಸ್ ಪಕ್ಷವು ಅಪ್ರಾಮಾಣಿಕವಾಗಿದೆ ಮತ್ತು ಕರ್ನಾಟಕ, ರಾಜಸ್ಥಾನ ಮತ್ತು ಹಿಮಾಚಲ ಪ್ರದೇಶದಲ್ಲಿ ಸುಳ್ಳು ಭರವಸೆಗಳನ್ನು ನೀಡಿದೆ ಎಂದು ದೂರಿದರು. 

ಭೋಪಾಲ್‌ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ, ಕಾಂಗ್ರೆಸ್ ಅತಿದೊಡ್ಡ 'ಥಗ್' ಮತ್ತು ಅವರ ಆಡಳಿತವಿರುವ ರಾಜ್ಯಗಳಲ್ಲಿ ಅವರು ನೀಡಿದ್ದ ಭರವಸೆಗಳು ವಿಫಲವಾಗಿವೆ ಎಂದು ಹೇಳಿದರು.

'ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಮಹಿಳೆಯರಿಗೆ ತಿಂಗಳಿಗೆ 1,500 ರೂಪಾಯಿ ನೀಡುವುದಾಗಿ ಭರವಸೆ ನೀಡಿತ್ತು. ಆದರೆ, ಕಳೆದ 10 ತಿಂಗಳಿನಿಂದ 22.5 ಲಕ್ಷಕ್ಕೂ ಹೆಚ್ಚು ಮಹಿಳೆಯರು ತಮ್ಮ 1,500 ರೂ. ಗಾಗಿ ಕಾಯುತ್ತಿದ್ದಾರೆ. ಮೊದಲ ಕ್ಯಾಬಿನೆಟ್ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಕಾಂಗ್ರೆಸ್ ಹೇಳಿತ್ತು. ಆದರೆ, ಅವರ ಭರವಸೆ ಹುಸಿಯಾಗಿದೆ ಎಂದು ಠಾಕೂರ್ ಹೇಳಿದರು.

'ಆಗ ಕಾಂಗ್ರೆಸ್ 1 ಲಕ್ಷ ಯುವಕರಿಗೆ ಉದ್ಯೋಗ ನೀಡುವುದಾಗಿ ಭರವಸೆ ನೀಡಿತ್ತು. ಅವರು 1,000 ಯುವಕರಿಗೆ ಸಹ ಉದ್ಯೋಗ ನೀಡಲು ಸಾಧ್ಯವಾಗಲಿಲ್ಲ. ಹಿಮಾಚಲ ಪ್ರದೇಶ, ಕರ್ನಾಟಕ ಮತ್ತು ರಾಜಸ್ಥಾನದಲ್ಲಿ ಕಾಂಗ್ರೆಸ್ ಅಪ್ರಾಮಾಣಿಕವಾಗಿದೆ ಮತ್ತು ಸುಳ್ಳು ಭರವಸೆಗಳನ್ನು ನೀಡಿದೆ' ಎಂದು ಅವರು ಹೇಳಿದರು.

ಮಧ್ಯಪ್ರದೇಶದಲ್ಲಿ ನವೆಂಬರ್ 17 ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. 230 ಸದಸ್ಯ ಬಲದ ವಿಧಾನಸಭೆಯ ಮತ ಎಣಿಕೆ ಡಿಸೆಂಬರ್ 3 ರಂದು ನಡೆಯಲಿದೆ.

ಇದಕ್ಕೂ ಮುನ್ನ ಶನಿವಾರ ರತ್ಲಾಮ್ ಜಿಲ್ಲೆಯಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ದೇಶವೇ ಆಗಿರಲಿ, ಮಧ್ಯಪ್ರದೇಶವೇ ಆಗಿರಲಿ, ಕಾಂಗ್ರೆಸ್‌ಗೆ ಸುಳ್ಳು ಭರವಸೆಗಳು ಮಾತ್ರ ಉಳಿದಿವೆ. ಕಾಂಗ್ರೆಸ್‌ಗೆ ಮಧ್ಯಪ್ರದೇಶದ ಅಭಿವೃದ್ಧಿಯ ಮಾರ್ಗಸೂಚಿಯೂ ತಿಳಿದಿಲ್ಲ. ಕಾಂಗ್ರೆಸ್ ನಾಯಕರು, ಅವರ ಮಾತುಗಳು ಮತ್ತು ಅವರ ಘೋಷಣೆಗಳೆಲ್ಲಾ ಸಿನೀಮಿಯವಾಗಿವೆ' ಎಂದು ಹೇಳಿದರು.

'ಡಿಸೆಂಬರ್ 3 ರಂದು ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದ ನಂತರ ಕಾಂಗ್ರೆಸ್‌ನ ನೈಜ ಚಿತ್ರಣ ಗೋಚರಿಸುತ್ತದೆ. ಪಕ್ಷದ ನಾಯಕರು ಇತರರ ಬಟ್ಟೆ ಹರಿದು ಹಾಕಲು ಪೈಪೋಟಿ ನಡೆಸುತ್ತಿದ್ದಾರೆ. ಅವರಿಗೆ ಅವಕಾಶ ನೀಡುವುದು ಎಂದರೆ ಬಿಕ್ಕಟ್ಟು ಸೃಷ್ಟಿಯಾದಂತೆ. ಬಡವರಿಗೆ ಉಚಿತ ಪಡಿತರ ಯೋಜನೆಯನ್ನು ಐದು ವರ್ಷಗಳವರೆಗೆ ವಿಸ್ತರಿಸಲು ತಮ್ಮ ಸರ್ಕಾರ ನಿರ್ಧರಿಸಿದೆ' ಎಂದು ಹೇಳಿದರು.

'ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ, ಕಳೆದ 3 ವರ್ಷಗಳಿಂದ ದೇಶದಲ್ಲಿ ಬಡವರಿಗೆ ಉಚಿತ ಪಡಿತರವನ್ನು ನೀಡಲಾಗುತ್ತಿದೆ. ವಾಸ್ತವದಲ್ಲಿ, ಈ ಯೋಜನೆಯ ಅವಧಿ 1 ತಿಂಗಳ ನಂತರ ಕೊನೆಗೊಳ್ಳುತ್ತಿದೆ. ಆದರೆ, ಬಿಜೆಪಿ ಸರ್ಕಾರವು ಮುಂದಿನ 5 ವರ್ಷಗಳವರೆಗೆ ಉಚಿತ ಪಡಿತರ ನೀಡುವ ಯೋಜನೆ ವಿಸ್ತರಿಸಲು ನಿರ್ಧರಿಸಿದೆ' ಎಂದು ಅವರು ಹೇಳಿದರು.

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಒಂದು ವರ್ಷಕ್ಕೆ 81 ಕೋಟಿಗೂ ಅಧಿಕ ಜನರಿಗೆ ಉಚಿತ ಆಹಾರ ಧಾನ್ಯಗಳನ್ನು ನೀಡುವುದಾಗಿ ಕೇಂದ್ರವು ಕಳೆದ ವರ್ಷ ಡಿಸೆಂಬರ್‌ನಲ್ಲಿ ಘೋಷಿಸಿತ್ತು. 

SCROLL FOR NEXT