ಚೆನ್ನೈ: ಎಂಟಿಸಿ ಬಸ್ ನಿಲ್ಲಿಸಿ ಫುಟ್‌ಬೋರ್ಡ್‌ನಲ್ಲಿ ಪ್ರಯಾಣಿಸುತ್ತಿದ್ದ ಶಾಲಾ ವಿದ್ಯಾರ್ಥಿಗಳಿಗೆ ಥಳಿಸಿದ ಆರೋಪದ ಮೇಲೆ ನಟಿ ಎಸ್. ರಂಜನಾ ನಾಚಿಯಾರ್ ಅವರನ್ನು ಚೆನ್ನೈ ನಗರ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಅವರು ವಿದ್ಯಾರ್ಥಿಗಳನ್ನು ಥಳಿಸುವ ಮತ್ತು ಬಸ್ ಸಿಬ್ಬಂದಿಯನ್ನು ನಿಂದಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಗುರುವಾರ ಸಂಜೆ ಸೈದಾಪೇಟೆ ಮತ್ತು ಕುಂದ್ರತ್ತೂರು ನಡುವೆ ಸಂಚರಿಸುವ ಎಂಟಿಸಿ ಬಸ್ ಮಾರ್ಗ ಸಂಖ್ಯೆ 188 ಸಮವಸ್ತ್ರದಲ್ಲಿದ್ದ ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಪ್ರಯಾಣಿಕರಿಂದ ತುಂಬಿತ್ತು. ಈ ವೇಳೆ 'ತಮ್ಮ ಕಾರಿನಲ್ಲಿ ಬರುತ್ತಿದ್ದ ರಂಜನಾ ಅವರು ಫುಟ್‌ಬೋರ್ಡ್‌ನಲ್ಲಿ ಮತ್ತು ಬಸ್ ಮೇಲೆ ಕುಳಿತು ಪ್ರಯಾಣಿಸುತ್ತಿದ್ದ ವಿದ್ಯಾರ್ಥಿಗಳನ್ನು ಗಮನಿಸಿದ್ದಾರೆ. ಪೋರೂರು ಸಿಗ್ನಲ್ ಬಳಿ ಬಸ್ ಅನ್ನು ಓವರ್ ಟೇಕ್ ಮಾಡಿದ ಅವರು, ಬಸ್ ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ. ಬಳಿಕ ಚಾಲಕನನ್ನು ನಿಂದಿಸಿದ್ದಾರೆ. ಕಂಡಕ್ಟರ್ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಫುಟ್‌ಬೋರ್ಡ್‌ನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿಗಳಿಗೆ ಅವರು ಮಹಿಳೆ ಕಪಾಳಮೋಕ್ಷ ಮಾಡಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ಈ ಸಂಬಂಧ ಬಸ್ ಚಾಲಕ ಆರ್. ಸರವಣನ್ (48) ಮಾಂಗಾಡು ಪೊಲೀಸರಿಗೆ ದೂರು ನೀಡಿದ್ದು, ಮಹಿಳೆ ತನ್ನ ಕರ್ತವ್ಯ ನಿಭಾಯಿಸಲು ಅಡ್ಡಿಪಡಿಸಿ ಸಾರ್ವಜನಿಕವಾಗಿ ನಿಂದಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಅವರ ದೂರಿನ ಆಧಾರದ ಮೇಲೆ ಪೊಲೀಸರು ರಂಜನಾ ವಿರುದ್ಧ ಸೆಕ್ಷನ್ 341, 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವ ಶಿಕ್ಷೆ), 353 (ನೌಕರನ ಕರ್ತವ್ಯ ನಿರ್ವಹಣೆ ತಡೆಯಲು ಸಾರ್ವಜನಿಕವಾಗಿ ಹಲ್ಲೆ ಅಥವಾ ಕ್ರಿಮಿನಲ್ ಬಲ) ಮತ್ತು 290 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಗೇರುಗಂಬಕ್ಕಂನಲ್ಲಿರುವ ಅವರ ಮನೆಯಲ್ಲಿ ನಟಿಯನ್ನು ಪೊಲೀಸ್ ತಂಡ ಬಂಧಿಸಿದೆ. ಸಂಜೆ ಶ್ರೀಪೆರಂಬದೂರು ನ್ಯಾಯಾಲಯಕ್ಕೆ ರಂಜನಾ ಅವರನ್ನು ಹಾಜರುಪಡಿಸಲಾಯಿತು. ಮುಂದಿನ 40 ದಿನಗಳ ಕಾಲ ಪ್ರತಿದಿನ ಮಾಂಗಾಡು ಪೊಲೀಸರ ಮುಂದೆ ಹಾಜರಾಗಿ ಸಹಿ ದಾಖಲಿಸುವಂತೆ ನ್ಯಾಯಾಲಯ ಆದೇಶಿಸಿದೆ.