ಕೋಲ್ಕತಾ: ಲೋಕಸಭೆಯಲ್ಲಿ ಉದ್ಯಮಿ ಗೌತಮ್ ಅದಾನಿ ವಿರುದ್ಧ ಪ್ರಶ್ನೆ ಕೇಳುವುದಕ್ಕೆ ಪ್ರತಿಯಾಗಿ ಭಾರಿ ಮೊತ್ತದ ಹಣ ಹಾಗೂ ದುಬಾರಿ ಉಡುಗೊರೆಗಳನ್ನು ಪಡೆದ ಆರೋಪ ಎದುರಿಸುತ್ತಿರುವ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರಿಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಹೊಸ ಜವಾಬ್ದಾರಿ ನೀಡಿದ್ದಾರೆ.
'ಹಣಕ್ಕಾಗಿ-ಪ್ರಶ್ನೆ'ಗೆ ಸಂಬಂಧಿಸಿದಂತೆ ಲೋಕಸಭೆ ನೈತಿಕ ಸಮಿತಿಯು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರನ್ನು ಉಚ್ಚಾಟನೆ ಮಾಡುವಂತೆ ಶಿಫಾರಸು ಮಾಡಿದೆ. ಆದರೆ ಮಹುವಾ ಬೆಂಬಲಕ್ಕೆ ನಿಂತಿರುವ ಟಿಎಂಸಿ, 2024 ರ ಸಾರ್ವತ್ರಿಕ ಚುನಾವಣೆಗೆ ಕೃಷ್ಣನಗರ(ನಾಡಿಯಾ ಉತ್ತರ) ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಮಾಡಲು ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಟಿಎಂಸಿ ಸೋಮವಾರ ರಾಜ್ಯದ 35 ಜಿಲ್ಲೆಗಳ ಜಿಲ್ಲಾಧ್ಯಕ್ಷರ ಪರಿಷ್ಕೃತ ಪಟ್ಟಿಯನ್ನು ಪ್ರಕಟಿಸಿದ್ದು, ಕೃಷ್ಣನಗರ ಜಿಲ್ಲಾಧ್ಯಕ್ಷರಾಗಿ ಮಹುವಾ ಮೊಯಿತ್ರಾ ಅವರನ್ನು ನೇಮಕ ಮಾಡಲಾಗಿದೆ. ಮಹುವಾ ಅವರು ಕೆಲವು ವರ್ಷಗಳ ಹಿಂದೆ ಕೃಷ್ಣಾನಗರ ಜಿಲ್ಲಾಧ್ಯಕ್ಷರಾಗಿದ್ದ ಕಾರ್ಯನಿರ್ವಹಿಸಿದ್ದರು. ಈಗ ಎರಡನೇ ಬಾರಿ ಜಿಲ್ಲಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಮಹುವಾ ಮೊಯಿತ್ರಾ ಅವರು, "ನನ್ನನ್ನು ಕೃಷ್ಣನಗರ(ನಾಡಿಯಾ ಉತ್ತರ) ಜಿಲ್ಲಾಧ್ಯಕ್ಷರನ್ನಾಗಿ ನೇಮಿಸಿದ್ದಕ್ಕಾಗಿ ಮಮತಾ ಬ್ಯಾನರ್ಜಿ ಅವರಿಗೆ ಮತ್ತು ಟಿಎಂಸಿಗೆ ಧನ್ಯವಾದಗಳು. ಕೃಷ್ಣನಗರದ ಜನರಿಗಾಗಿ ಪಕ್ಷದೊಂದಿಗೆ ಯಾವಾಗಲೂ ಕೆಲಸ ಮಾಡುತ್ತೇನೆ" ಎಂದು ಹೇಳಿದ್ದಾರೆ.