ದೇಶ

ರಾಜಸ್ಥಾನ ಬಿಜೆಪಿ ನಾಯಕ ಅಮೀನ್ ಪಠಾಣ್ ಕಾಂಗ್ರೆಸ್ ಸೇರ್ಪಡೆ

Lingaraj Badiger

ಜೈಪುರ: ಭಾರತೀಯ ಜನತಾ ಪಕ್ಷದ ನಾಯಕ ಮತ್ತು ರಾಜಸ್ಥಾನ ಕ್ರಿಕೆಟ್ ಸಂಸ್ಥೆಯ ಮಾಜಿ ಉಪಾಧ್ಯಕ್ಷ ಅಮೀನ್ ಪಠಾಣ್ ಅವರು ಬುಧವಾರ ಕೇಸಿರ ಪಕ್ಷ ತೊರೆದು ಕಾಂಗ್ರೆಸ್ ಸೇರಿದರು.

ಇಂದು ಜೈಪುರದಲ್ಲಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಪಕ್ಷದ ಇತರ ಹಿರಿಯ ನಾಯಕರ ಸಮ್ಮುಖದಲ್ಲಿ ಅಮೀನ್ ಪಠಾಣ್ ಅವರು ಸೇರ್ಪಡೆಯಾದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪಠಾಣ್, ದೇಶವನ್ನು ಒಗ್ಗೂಡಿಸಲು ಅಟಲ್ ಬಿಹಾರಿ ವಾಜಪೇಯಿ, ಭೈರೋನ್ ಸಿಂಗ್ ಶೇಖಾವತ್ ಮತ್ತು ಇತರ ನಾಯಕರ ನೀತಿಗಳಿಂದ ಸ್ಫೂರ್ತಿಗೊಂಡು 25 ವರ್ಷಗಳ ಕಾಲ ಬಿಜೆಪಿಯಲ್ಲಿದ್ದೆ. ಆದರೆ ಇಂದಿನ ಬಿಜೆಪಿಯಲ್ಲಿ ಗುಜರಾತ್‌ನ ಜನರಿಗೆ ಮತ್ತು ಕೈಗಾರಿಕೋದ್ಯಮಿಗಳಿಗೆ ಮಾತ್ರ ಬಡ್ತಿ ನೀಡಲಾಗುತ್ತಿದೆ ಎಂದು ಆರೋಪಿಸಿದರು.

“ಅವರು (ಬಿಜೆಪಿ) ‘ಸಬ್ಕಾ ಸಾಥ್, ಸಬ್ಕಾ ವಿಕಾಸ್’ ಎಂಬ ಘೋಷಣೆಯನ್ನು ನೀಡಿದರು. ಆದರೆ ವಾಸ್ತವವೆಂದರೆ ಚುನಾವಣೆಯಲ್ಲಿ ಒಬ್ಬ ಮುಸಲ್ಮಾನರಿಗೂ ಟಿಕೆಟ್ ನೀಡುವುದಿಲ್ಲ. ಸಮಾಜದ ಒಂದು ವರ್ಗವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗುತ್ತಿದೆ. ಇಂತಹ ಸಂಗತಿಗಳಿಂದ ನಾನು ನೋಂದಿದ್ದೇನೆ. ಹೀಗಾಗಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದೇನೆ ಎಂದು ಪಠಾಣ್ ಹೇಳಿದ್ದಾರೆ.

ಈ ಸಂದರ್ಭದಲ್ಲಿ ರಾಜಸ್ಥಾನದ ಕಾಂಗ್ರೆಸ್ ಉಸ್ತುವಾರಿ ಸುಖ್ಜೀಂದರ್ ಸಿಂಗ್ ರಾಂಧವಾ ಕೂಡ ಉಪಸ್ಥಿತರಿದ್ದರು.

SCROLL FOR NEXT