ದೇಶ

ಕುಲ್ಗಾಮ್ ಎನ್‌ಕೌಂಟರ್: ಐವರು ಲಷ್ಕರ್-ಎ-ತೊಯ್ಬಾ ಉಗ್ರರ ಹತ್ಯೆ, ಕಾರ್ಯಾಚರಣೆ ಮುಂದುವರಿಕೆ

Nagaraja AB

ಕುಲ್ಗಾಮ್: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ನಲ್ಲಿ ಶುಕ್ರವಾರ ಭದ್ರತಾ ಪಡೆಗಳು ಹಾಗೂ ಭಯೋತ್ಪಾದಕರ ನಡುವೆ ನಡೆದ ಎನ್ ಕೌಂಟರ್ ನಲ್ಲಿ ಐವರು ಲಷ್ಕರ್-ಎ-ತೊಯ್ಬಾ ಉಗ್ರರನ್ನು ಹೊಡೆದುರುಳಿಸಲಾಗಿದೆ. ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ. ಸೇನೆಯ 34 ರಾಷ್ಟ್ರೀಯ ರೈಫಲ್ಸ್, ವಿಶೇಷ ಪಡೆಗಳ ಘಟಕ, ಪೊಲೀಸ್ ಮತ್ತು ಸಿಆರ್‌ಪಿಎಫ್ ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ.

ಉಗ್ರರು ಅಡಗಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು, ಸೇನೆ ಮತ್ತು ಸಿಆರ್‌ಪಿಎಫ್‌ ಸಹಯೋಗದಲ್ಲಿ ಆ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾಗ ಜಿಲ್ಲೆಯ ಸಾಮ್ನೂ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಎನ್‌ಕೌಂಟರ್ ಉಂಟಾಗಿದೆ.

ಕುಲ್ಗಾಮ್‌ನಲ್ಲಿ ಸೇನೆಯು ಮೂವರು ಭಯೋತ್ಪಾದಕರನ್ನು ಹೊಡೆದುರುಳಿಸಿದೆ ಎಂದು ಭಾರತೀಯ ಏರೋಸ್ಪೇಸ್ ಡಿಫೆನ್ಸ್ ನ್ಯೂಸ್ ಹೇಳಿದೆ. ಈ ಮಧ್ಯೆ, ಉರಿ ಸೆಕ್ಟರ್‌ನ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಗುರುವಾರ ಉಗ್ರರ ಒಳನುಸುಳುವಿಕೆ ಪ್ರಯತ್ನವನ್ನು ಸೇನೆಯು ವಿಫಲಗೊಳಿಸಿದ್ದು, ಭಯೋತ್ಪಾದಕ ಕಮಾಂಡರ್ ಬಶೀರ್ ಅಹ್ಮದ್ ಮಲಿಕ್ ಸೇರಿದಂತೆ ಇಬ್ಬರು ನುಸುಳುಕೋರರು ಹತ್ಯೆಯಾಗಿದ್ದಾರೆ ಎಂದು ಸೇನೆ ತಿಳಿಸಿದೆ. 

ಕಳೆದ ವಾರದ ಆರಂಭದಲ್ಲಿ, ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಲಷ್ಕರ್-ಎ-ತೊಯ್ಬಾ ಶಾಖೆಯಾದ ಟಿಆರ್‌ಎಫ್ ಉಗ್ರನೊಬ್ಬನನ್ನು ಭದ್ರತಾ ಪಡೆಗಳು ಹೊಡೆದುರುಳಿಸಿದವು. 
ಅಕ್ಟೋಬರ್‌ನಲ್ಲಿ ಇಬ್ಬರು ಉಗ್ರರನ್ನು ಭದ್ರತಾ ಪಡೆಗಳು ಹತ್ಯೆಗೈದಿದ್ದವು. 

SCROLL FOR NEXT