ದೇಶ

ತೆಲಂಗಾಣ ಪತ್ರಿಕೆಗಳಲ್ಲಿ ಗ್ಯಾರಂಟಿ ಬಗ್ಗೆ ಜಾಹಿರಾತು: ಕರ್ನಾಟಕ ಸರ್ಕಾರಕ್ಕೆ ಚುನಾವಣಾ ಆಯೋಗ ನೋಟಿಸ್

Nagaraja AB

ನವದೆಹಲಿ: ನವೆಂಬರ್ 30 ರಂದು ಚುನಾವಣೆ ನಡೆಯಲಿರುವ ತೆಲಂಗಾಣದಲ್ಲಿನ ಪತ್ರಿಕೆಗಳಲ್ಲಿ ಗ್ಯಾರಂಟಿ ಕುರಿತು ಜಾಹಿರಾತು ನೀಡುವುದನ್ನು ನಿಲ್ಲಿಸುವಂತೆ ಚುನಾವಣಾ ಆಯೋಗ ಸೋಮವಾರ ಕರ್ನಾಟಕದ ಕಾಂಗ್ರೆಸ್ ಸರ್ಕಾರಕ್ಕೆ ಸೂಚಿಸಿದೆ. ಅಲ್ಲದೇ ಚುನಾವಣಾ ನೀತಿ ಸಂಹಿತೆಯ ಅಡಿಯಲ್ಲಿ ಕಡ್ಡಾಯವಾಗಿ ಪೂರ್ವಾನುಮತಿ ಪಡೆಯದ ಕಾರಣದಿಂದ ವಿವರಣೆಯನ್ನು ಕೇಳಿದೆ.

ಚುನಾವಣೆ ಮೇಲೆ ಕಣ್ಣಿಟ್ಟು, ತೆಲಂಗಾಣದ ಮಾಧ್ಯಮಗಳಲ್ಲಿ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಜಾಹಿರಾತು ಪ್ರಕಟಿಸುವ ಮೂಲಕ  ಜನತಾ ಪ್ರಾತಿನಿಧ್ಯ ಕಾಯ್ದೆ ಮತ್ತು ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದೆ ಎಂದು ಆರೋಪಿಸಿ ಬಿಜೆಪಿ ಆಯೋಗಕ್ಕೆ ಮೊನ್ನೆ ದೂರು ಸಲ್ಲಿಸಿತ್ತು. ಬಿಆರ್‌ಎಸ್ ಕೂಡ ಈ ವಿಚಾರವಾಗಿ ಚುನಾವಣಾ ಸಮಿತಿಯನ್ನು ಸಂಪರ್ಕಿಸಿದೆ.

ಈ ಸಂಬಂಧ ಕರ್ನಾಟಕ ಮುಖ್ಯ ಕಾರ್ಯದರ್ಶಿಗೆ ಆಯೋಗ ಪತ್ರ ಬರೆದಿದ್ದು, ಜಾಹಿರಾತು ಪ್ರಕಟಿಸಲು ರಾಜ್ಯ ಸರ್ಕಾರ ಪೂರ್ವಾನುಮತಿ ಪಡೆದಿಲ್ಲ, ಇದು ವರ್ಷಗಳ ಹಿಂದೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನೀಡಲಾದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದೆ. ಆಯೋಗದಿಂದ ರಾಜ್ಯ ಸರ್ಕಾರ ಅಗತ್ಯ ಅನುಮೋದನೆ ತೆಗೆದುಕೊಳ್ಳುವವರೆಗೆ ತೆಲಂಗಾಣದಲ್ಲಿ ಕರ್ನಾಟಕ ಸರ್ಕಾರವ ಅಂತಹ ಯಾವುದೇ ಜಾಹಿರಾತು ಪ್ರಕಟಿಸುವುದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಹೇಳಿದೆ. 

ಮಾದರಿ ನೀತಿ ಸಂಹಿತೆ ಸೂಚನೆಗಳ ಉಲ್ಲಂಘನೆಗೆ ಕಾರಣವಾದ ಸಂದರ್ಭಗಳ ಕುರಿತು ಮಂಗಳವಾರ ಸಂಜೆ 5 ಗಂಟೆಯೊಳಗೆ ವಿವರಣೆ ನೀಡುವಂತೆ ಕೇಳಿದೆ. ಎಂಸಿಸಿ ಸೂಚನೆಗಳ ಪ್ರಕಾರ ಕಾರ್ಯವಿಧಾನದ ಉಲ್ಲಂಘನೆಗಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಭಾರಿ ಕಾರ್ಯದರ್ಶಿ ವಿರುದ್ಧ ಏಕೆ ಶಿಸ್ತು ಕ್ರಮ   ತೆಗೆದುಕೊಳ್ಳಬಾರದು ಎಂದು ಆಯೋಗ  ಕೇಳಿದೆ.

ಈ ಹಿಂದೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಲ್ಯಾಣ ಯೋಜನೆಗಳು ಮತ್ತು ಸಾಧನೆಗಳನ್ನು ಎತ್ತಿ ತೋರಿಸುವ ಕೆಲವು ಜಾಹಿರಾತುಗಳನ್ನು ಚುನಾವಣೆಗೆ ಒಳಪಡದ ಕೆಲವು ರಾಜ್ಯಗಳು ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿನ ಪತ್ರಿಕೆಗಳಲ್ಲಿ ಪ್ರಕಟಿಸುತ್ತಿರುವುದನ್ನು ಆಯೋಗವು ಗಮನಿಸಿತ್ತು. ಇದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಎಂದು ಆಯೋಗ ಪರಿಗಣಿಸಿತ್ತು. ಭವಿಷ್ಯದಲ್ಲಿ, ಮಾದರಿ ನೀತಿ ಸಂಹಿತೆ ಅವಧಿಯಲ್ಲಿ ಚುನಾವಣೆಗೆ ಒಳಪಡದ ರಾಜ್ಯಗಳು ಹೊರಡಿಸಿದ ಎಲ್ಲಾ ಜಾಹಿರಾತುಗಳನ್ನು ಪತ್ರಿಕೆಗಳಲ್ಲಿ ಪ್ರಕಟಣೆಗೆ ಕಳುಹಿಸುವ ಮೊದಲು ಕ್ಲಿಯರೆನ್ಸ್ ಗಾಗಿ ಆಯೋಗಕ್ಕೆ ರವಾನಿಸಲಾಗುವುದು ಎಂದು ಆಯೋಗ 2013 ರಲ್ಲಿ ನಿರ್ದೇಶಿಸಿತ್ತು. 

ನವೆಂಬರ್ 30 ರಂದು ತೆಲಂಗಾಣದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಆಡಳಿತಾರೂಢ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್), ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.

SCROLL FOR NEXT