ಪಾಟ್ನಾ: ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರ ಹಿಂದೂ ಹಬ್ಬಗಳ ಸಂದರ್ಭದಲ್ಲಿ ರಾಜ್ಯದ ಶಾಲೆಗಳಿಗೆ ನೀಡಲಾಗಿದ್ದ ರಜೆಯ ಸಂಖ್ಯೆಯನ್ನು ಕಡಿತಗೊಳಿಸಿ, ಮುಸ್ಲಿಂ ಹಬ್ಬಗಳಿಗೆ ರಜೆ ಹೆಚ್ಚಿಸಿದೆ ಎಂದು ಪ್ರತಿಪಕ್ಷ ಬಿಜೆಪಿ ಮಂಗಳವಾರ ಆರೋಪಿಸಿದೆ.
ನಿತೀಶ್ ಕುಮಾರ್ ಅವರು ಓಲೈಕೆ ರಾಜಕೀಯದ ಮಾಸ್ಟರ್ ಎಂದು ಟೀಕಿಸಿದ ಬಿಜೆಪಿ ನಾಯಕ ಅಶ್ವಿನಿ ಚೌಬೆ ಅವರು, ಜೆಡಿಯು-ಆರ್‌ಜೆಡಿ ಸರ್ಕಾರ ಹಿಂದೂ ವಿರೋಧಿ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಬಿಹಾರ ಸರ್ಕಾರವು ಸನಾತನ ಸಂಸ್ಥೆಯನ್ನು ಮತ ಬ್ಯಾಂಕ್‌ಗಾಗಿ ದ್ವೇಷಿಸುತ್ತಿದೆ ಎಂದು ಆರೋಪಿಸಿದರು.
ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಹಿರಿಯ ಬಿಜೆಪಿ ನಾಯಕ, "ಮತ್ತೊಮ್ಮೆ, ಚಿಕ್ಕಪ್ಪ-ಸೋದರಳಿಯ ಸರ್ಕಾರದ ಹಿಂದೂ ವಿರೋಧಿ ನೀತಿ ಬಹಿರಂಗವಾಗಿದೆ. ಒಂದು ಕಡೆ, ಮುಸ್ಲಿಂ ಹಬ್ಬಗಳಿಗೆ ಶಾಲೆಗಳಲ್ಲಿ ರಜೆಯನ್ನು ವಿಸ್ತರಿಸಲಾಗುತ್ತಿದೆ. ಆದರೆ ಹಿಂದೂ ಹಬ್ಬಗಳ ರಜಾದಿನಗಳನ್ನು ಕಡಿತಗೊಳಿಸಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ವೋಟ್ ಬ್ಯಾಂಕ್‌ಗಾಗಿ ಸನಾತನ ಸಂಸ್ಥೆಯನ್ನು ದ್ವೇಷಿಸುವ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ಟೀಕಿಸಿದ್ದಾರೆ.
ಎಎನ್‌ಐ ಜೊತೆ ಮಾತನಾಡಿದ ಬಿಜೆಪಿ ಸಂಸದ ಸುಶೀಲ್ ಮೋದಿ ಅವರು, ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರ ತನ್ನ ಹಿಂದೂ ವಿರೋಧಿ ಮುಖವನ್ನು ತೋರಿಸಿದೆ ಮತ್ತು ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವ ನಿರ್ಧಾರವನ್ನು ತೆಗೆದುಕೊಂಡಿದೆ ... ಹಿಂದೂ ಹಬ್ಬಗಳಿಗೆ ನೀಡಲಾಗಿದ್ದ ರಜೆಗಳನ್ನು ಕಡಿತಗೊಳಿಸಲಾಗಿದೆ. ಆದರೆ ಮುಸ್ಲಿಂ ಹಬ್ಬಗಳಿಗೆ ರಜಾದಿನಗಳನ್ನು ಹೆಚ್ಚಿಸಲಾಗಿದೆ" ಎಂದು ದೂರಿದರು.
"ಲಾಲು ಯಾದವ್ ಮತ್ತು ನಿತೀಶ್ ಸರ್ಕಾರ ಹಿಂದೂಗಳ ಮೇಲೆ ಆಕ್ರಮಣ ಮಾಡುತ್ತಿರುವ ರೀತಿ ನೋಡಿದರೆ ಮುಂದೆ ಅವರು ಮೊಹಮ್ಮದ್ ನಿತೀಶ್ ಮತ್ತು ಮೊಹಮ್ಮದ್ ಲಾಲು ಎಂದು ಬದಲಾಗುತ್ತಾರೆ" ಎಂದು ಬಿಜೆಪಿ ನಾಯಕರು ಟೀಕಿಸಿದ್ದಾರೆ.
ಬಿಹಾರ ಶಾಲಾ ಶಿಕ್ಷಣ ಇಲಾಖೆ ಸೋಮವಾರ 2024ನೇ ಸಾಲಿನ ರಜಾ ದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಶಿಕ್ಷಣ ಹಕ್ಕು ಕಾಯ್ದೆ ಅಡಿ 220 ಕಲಿಕಾ ದಿನಗಳನ್ನು ಘೋಷಿಸಿದೆ.