ದೇಶ

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶಾದ್ಯಂತ 'ರಾಜಸ್ಥಾನ ಮಾದರಿ' ಆರೋಗ್ಯ ವಿಮೆ: ರಾಹುಲ್ ಗಾಂಧಿ

Lingaraj Badiger

ವಯನಾಡ್: ರಾಜಸ್ಥಾನ ಸರ್ಕಾರ ಬಡವರಿಗಾಗಿ ಪ್ರಾರಂಭಿಸಿದ ಆರೋಗ್ಯ ವಿಮೆ ಕಾರ್ಯಕ್ರಮವನ್ನು ಶ್ಲಾಘಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, 2024 ರ ಲೋಕಸಭಾ ಚುನಾವಣೆಯ ನಂತರ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 'ರಾಜಸ್ಥಾನ ಮಾದರಿ' ಆರೋಗ್ಯ ಯೋಜನೆಯನ್ನು ದೇಶಾದ್ಯಂತ ಜಾರಿಗೊಳಿಸುವುದಾಗಿ ಗುರುವಾರ ಹೇಳಿದ್ದಾರೆ.

ಕ್ಯಾನ್ಸರ್ ಅಥವಾ ಹೃದ್ರೋಗದಂತಹ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ಬಡವರು ಹಣಕಾಸಿನ ಸಮಸ್ಯೆ ಎದುರಿಸುತ್ತಿರುವಾಗ ಅವರಿಗೆ ದೊಡ್ಡ ಆಸ್ಪತ್ರೆಗಳಲ್ಲಿ ಗುಣಮಟ್ಟದ ಚಿಕಿತ್ಸೆ ಪಡೆಯಲು ರಾಜಸ್ಥಾನ ಸರ್ಕಾರದ ಆರೋಗ್ಯ ಯೋಜನೆ ನೆರವಾಗುತ್ತದೆ ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.

ತಮ್ಮ ಲೋಕಸಭಾ ಕ್ಷೇತ್ರವಾದ ವಯನಾಡಿನ ಸುಲ್ತಾನ್ ಬತ್ತೇರಿಯಲ್ಲಿ ಖಾಸಗಿ ಆಸ್ಪತ್ರೆಯೊಂದರ ಹೊಸ ಬ್ಲಾಕ್ ಉದ್ಘಾಟಿಸಿ ಮಾತನಾಡಿದ ಕಾಂಗ್ರೆಸ್ ನಾಯಕ, "ನಾನು ಭಾರತದಾದ್ಯಂತ ಸಾಕಷ್ಟು ಪ್ರವಾಸ ಮಾಡುತ್ತೇನೆ ಮತ್ತು ವೈದ್ಯಕೀಯ ಸಮಸ್ಯೆಗಳ ದೊಡ್ಡ ಬಲಿಪಶುಗಳು ಬಡವರು ಎಂಬುದನ್ನು ನಾನು ಗಮನಿಸಿದ್ದೇನೆ. ಏಕೆಂದರೆ ನಿಮ್ಮ ಬಳಿ ಹಣವಿದ್ದರೆ ನೀವು ಯಾವಾಗಲೂ ಉತ್ತಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು" ಎಂದರು.

ಹಣಕಾಸಿನ ಸಾಮರ್ಥ್ಯವು ದೊಡ್ಡ ಆಸ್ಪತ್ರೆಗಳಲ್ಲಿ ಗುಣಮಟ್ಟದ ಚಿಕಿತ್ಸೆಗೆ ಅವಕಾಶ ನೀಡುತ್ತದೆ. ಆದರೆ ಬಡವರು ಕ್ಯಾನ್ಸರ್ ಅಥವಾ ಹೃದ್ರೋಗದಂತಹ ಕಾಯಿಲೆಗಳನ್ನು ಚಿಕಿತ್ಸೆ ಪಡೆಯಲು ಗುಣಮಟ್ಟದ ಚಿಕಿತ್ಸೆ ಪಡೆಯಲು ಸಾಧ್ಯವಾಗದೇ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದರು.

ಕೇಂದ್ರ ಸರ್ಕಾರ, ಜನರಿಗೆ ಮೂಲಭೂತ ಭರವಸೆಯಾಗಿ ಬಡವರಿಗೆ ಉತ್ತಮ ಆರೋಗ್ಯ ಸೇವೆಯನ್ನು ಒದಗಿಸಲು ಆದ್ಯತೆ ನೀಡಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ಹೇಳಿದರು.

"ರಾಷ್ಟ್ರ ಮಟ್ಟದಲ್ಲಿ ನಾವು ಆರೋಗ್ಯ ರಕ್ಷಣೆಯ ಬಗ್ಗೆ ಯೋಚಿಸುವ ವಿಧಾನವನ್ನು ಮರುಪರಿಶೀಲಿಸಬೇಕಾಗಿದೆ. ಕೇಂದ್ರ ಸರ್ಕಾರವು ಜನರಿಗೆ, ವಿಶೇಷವಾಗಿ ಬಡ ಜನರಿಗೆ ನಿಜವಾಗಿಯೂ ಕಡಿಮೆ ವೆಚ್ಚದಲ್ಲಿ ಆರೋಗ್ಯ ಸೇವೆ ನೀಡುವ ಬಗ್ಗೆ ಯೋಚಿಸಬೇಕಾದ ಖಾತರಿಗಳಲ್ಲಿ ಒಂದಾಗಿದೆ. ರಾಜಸ್ಥಾನದಲ್ಲಿ ಈ ಕುರಿತು ಕೆಲವು ಕೆಲಸಗಳನ್ನು ನಾವು ಮಾಡಿದ್ದೇವೆ ಮತ್ತು 2024 ರಲ್ಲಿ ನಾವು ಅಧಿಕಾರಕ್ಕೆ ಬಂದರೆ, ರಾಷ್ಟ್ರದಾದ್ಯಂತ ರಾಜಸ್ಥಾನ ಮಾದರಿಯನ್ನು ಜಾರಿಗೆ ತರಲು ಪ್ರಯತ್ನಿಸುತ್ತೇವೆ ಎಂದು ಭರವಸೆ ನೀಡಿದರು.

10 ಲಕ್ಷ ರೂಪಾಯಿ ವರೆಗೆ ನಗದು ರಹಿತ ಚಿಕಿತ್ಸೆ ಅವಕಾಶ ಕಲ್ಪಿಸುವ ರಾಜಸ್ಥಾನ ಕಾಂಗ್ರೆಸ್ ಸರ್ಕಾರದ ಚಿರಂಜೀವಿ ಆರೋಗ್ಯ ವಿಮಾ ಯೋಜನೆ ಇಡೀ ದೇಶಕ್ಕೆ "ಮಾದರಿ" ಎಂದು ಶ್ಲಾಘಿಸಿದ ರಾಹುಲ್ ಗಾಂಧಿ, ಅಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ ಅರೋಗ್ಯ ವಿಮೆಯ ಮೊತ್ತವನ್ನು 50 ಲಕ್ಷಕ್ಕೆ ಹೆಚ್ಚಿಸುವುದಾಗಿ ತಿಳಿಸಿದರು.

SCROLL FOR NEXT