ಹೈದರಾಬಾದ್: ತೆಲಂಗಾಣದಲ್ಲಿ 119 ವಿಧಾನಸಭಾ ಸ್ಥಾನಗಳಿಗೆ ಮತದಾನ ಇಂದು ಗುರುವಾರ ಬೆಳಗ್ಗೆ 7 ಗಂಟೆಗೆ ಆರಂಭವಾಗಿದ್ದು ಮುಂದುವರಿಯುತ್ತಿದೆ. ಬೆಳಗ್ಗೆ 9 ಗಂಟೆಯವರೆಗೆ ಶೇಕಡಾ 8.33ರಷ್ಟು ಮತದಾನವಾಗಿದೆ.
ತೆಲಂಗಾಣದ ಆಡಳಿತಾರೂಢ ಬಿಆರ್‌ಎಸ್ ಎಲ್ಲಾ 119 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಸೀಟು ಹಂಚಿಕೆ ಒಪ್ಪಂದದ ಪ್ರಕಾರ, ಬಿಜೆಪಿ ಮತ್ತು ನಟ ಪವನ್ ಕಲ್ಯಾಣ್ ನೇತೃತ್ವದ ಜನಸೇನೆ ಕ್ರಮವಾಗಿ 111 ಮತ್ತು 8 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದ್ದರೆ, ಕಾಂಗ್ರೆಸ್ ತನ್ನ ಮಿತ್ರ ಪಕ್ಷವಾದ ಸಿಪಿಐಗೆ ಒಂದು ಸ್ಥಾನವನ್ನು ನೀಡಿ 118 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ.
ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂ ನಗರದ ಒಂಬತ್ತು ವಿಭಾಗಗಳಲ್ಲಿ ಅಭ್ಯರ್ಥಿಗಳನ್ನು ಹಾಕಿದೆ. 2014 ರಲ್ಲಿ ಪ್ರಾರಂಭವಾದ ತನ್ನ ಗೆಲುವಿನ ಓಟವನ್ನು ವಿಸ್ತರಿಸಲು ಬಿಆರ್‌ಎಸ್ ಉತ್ಸುಕವಾಗಿದ್ದರೆ, ಹಿಂದಿನ ಯುಪಿಎ ಸರ್ಕಾರ ತೆಲಂಗಾಣಕ್ಕೆ ರಾಜ್ಯ ಸ್ಥಾನಮಾನವನ್ನು ನೀಡಿದಾಗ 2018 ಮತ್ತು ನಾಲ್ಕು ವರ್ಷಗಳ ಹಿಂದೆ ಸೋಲಿನ ರುಚಿಯನ್ನು ಅನುಭವಿಸಿದ ಕಾಂಗ್ರೆಸ್ ಚುನಾವಣೆಯಲ್ಲಿ ಗೆಲ್ಲಲು ಈ ಬಾರಿ ತೀವ್ರ ಹೋರಾಟಕ್ಕೆ ಇಳಿದಿದೆ.
ಇದನ್ನೂ ಓದಿ: ತೆಲಂಗಾಣ ವಿಧಾನಸಭಾ ಚುನಾವಣೆ 2023: ಮತದಾನ ಪ್ರಕ್ರಿಯೆ ಆರಂಭ; 2,290 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರ
9 ಗಂಟೆಯವರೆಗೆ ಶೇ.8.52 ಮತದಾನ: ಇಂದು ಬೆಳಗ್ಗೆ 9 ಗಂಟೆಯ ವೇಳೆಗೆ ಶೇಕಡಾ 8.52ರಷ್ಟು ಮತದಾನವಾಗಿದೆ. ಅದಿಲಾಬಾದ್ ನಲ್ಲಿ ಶೇಕಡಾ 13.50ರಷ್ಟು, ಭದ್ರಾದ್ರಿಯಲ್ಲಿ ಶೇಕಡಾ 8.33ರಷ್ಟು, ಹನುಮಂಕೊಂಡದಲ್ಲಿ ಶೇಕಡಾ 6.89ರಷ್ಟು, ಜಗ್ತಿಯಾಲ್ ನಲ್ಲಿ ಶೇಕಡಾ 10.82ರಷ್ಟಿ ಮತದಾನವಾಗಿದೆ.
119 ಕ್ಷೇತ್ರಗಳಲ್ಲಿ 2,290 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದು, 221 ಮಹಿಳಾ ಮತ್ತು ಒಬ್ಬರು ತೃತೀಯ ಲಿಂಗಿ ಸ್ಪರ್ಧಿಗಳು ಕಣದಲ್ಲಿದ್ದಾರೆ.
ಡಿಸೆಂಬರ್ 3ಕ್ಕೆ ಮತ ಎಣಿಕೆಯಾಗಿದ್ದು ಅಂದೇ ರಾಜಸ್ತಾನ, ಮಧ್ಯ ಪ್ರದೇಶ, ಛತ್ತೀಸ್ ಗಢ ಮತ್ತು ಮಿಜೋರಾಂ ರಾಜ್ಯಗಳ ಚುನಾವಣೆ ಫಲಿತಾಂಶ ಕೂಡ ಪ್ರಕಟವಾಗಲಿದೆ.