ದೇಶ

ನಾಗ್ಪುರದ 2 ಸರ್ಕಾರಿ ಆಸ್ಪತ್ರೆಗಳಲ್ಲಿ ಒಂದೇ ದಿನ 23 ಸಾವು! 

Srinivas Rao BV

ಮುಂಬೈ: ಮಹಾರಾಷ್ಟ್ರದ 2 ಸರ್ಕಾರಿ ಆಸ್ಪತ್ರೆಗಳಲ್ಲಿ 24 ಗಂಟೆಗಳ ಅವಧಿಯಲ್ಲಿ ಒಟ್ಟು 23 ಮಂದಿ ಸಾವನ್ನಪ್ಪಿದ್ದಾರೆ. 

ಒಂದು ಆಸ್ಪತ್ರೆಯಲ್ಲಿ 14 ಮಂದಿ ಸಾವನ್ನಪ್ಪಿದ್ದರೆ, ಮತ್ತೊಂದರಲ್ಲಿ 9 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಎರಡೂ ಆಸ್ಪತ್ರೆಗಳ ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದು, ಸೆಪ್ಟೆಂಬರ್ 30 ಮತ್ತು ಅಕ್ಟೋಬರ್ 2 ರ ನಡುವೆ ನಾಂದೇಡ್‌ನ ಡಾ.ಶಂಕರರಾವ್ ಚವಾಣ್ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 48 ಗಂಟೆಗಳಲ್ಲಿ 31 ರೋಗಿಗಳು ಮತ್ತು ಛತ್ರಪತಿ ಸಂಭಾಜಿನಗರದ ಸರ್ಕಾರಿ ಆಸ್ಪತ್ರೆಯಲ್ಲಿ 24 ಗಂಟೆಗಳ ಅವಧಿಯಲ್ಲಿ 18 ಸಾವುಗಳು ವರದಿಯಾದ ಬೆನ್ನಲ್ಲೇ ಈ ಹೊಸ ಪ್ರಕರಣಗಳು ವರದಿಯಾಗಿವೆ. 

ಬುಧವಾರ ಬೆಳಿಗ್ಗೆ 8 ಗಂಟೆ ವೇಳೆಗೆ ನಾಗ್ಪುರದ ಸರ್ಕಾರಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಬುಧವಾರ ಬೆಳಿಗ್ಗೆ ವರೆಗೂ 14 ಮಂದಿ ಸಾವನ್ನಪ್ಪಿದ್ದಾರೆ. 

ಜಿಎಂಸಿಹೆಚ್ ಡೀನ್ ಡಾ. ರಾಜ್ ಗಜಭಿಯೇ ಈ ಬಗ್ಗೆ ಮಾತನಾಡಿದ್ದು 1,900 ಬೆಡ್ ಗಳ ವ್ಯವಸ್ಥೆ ಇಲ್ಲಿ ಇದ್ದು, ಸರಾಸರಿ ದಿನವೊಂದಕ್ಕೆ 10-12 ಮಂದಿಯ ಸಾವು ವರದಿಯಾಗುತ್ತದೆ ಎಂದು ಹೇಳಿದ್ದಾರೆ.

"ಆಸ್ಪತ್ರೆಯಲ್ಲಿ ಸಾಯುವ ರೋಗಿಗಳು ಹೆಚ್ಚಾಗಿ ಕೊನೆಯ ಕ್ಷಣದಲ್ಲಿ ಕರೆತರಲಾಗಿರುವವರು ಮತ್ತು ತೀವ್ರ ನಿಗಾ ಘಟಕ (ಐಸಿಯು)ದ ಅಗತ್ಯವಿರುವವರು. ಅಂತಹ ರೋಗಿಗಳನ್ನು ಗಂಭೀರ ಸ್ಥಿತಿಯಲ್ಲಿ GMCH ಗೆ ತರಲಾಗುತ್ತದೆ" ಎಂದು ಅವರು ಹೇಳಿದ್ದಾರೆ. 

ಇದೇ ಮಾದರಿಯಲ್ಲಿ ಇಂದಿರಾ ಗಾಂಧಿ ಸರ್ಕಾರಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ (ಐಜಿಜಿಎಂಸಿಹೆಚ್) 24 ಗಂಟೆಗಳಲ್ಲಿ 9 ಮಂದಿ ಸಾವನ್ನಪ್ಪಿದ್ದಾರೆ.  ಐಜಿಜಿಎಂಸಿ ಹೆಚ್ ನಲ್ಲಿ 800 ಬೆಡ್ ಗಳಿದ್ದು, ಆಸ್ಪತ್ರೆಯಲ್ಲಿ  ಔಷಧಗಳು ಮತ್ತು ಇತರ ಸೌಲಭ್ಯಗಳ ಸಾಕಷ್ಟು ದಾಸ್ತಾನು ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

SCROLL FOR NEXT