ದೇಶ

ಬಿಹಾರದ ಮಾದರಿಯಲ್ಲಿ ರಾಜಸ್ಥಾನದಲ್ಲಿಯೂ ಜಾತಿ ಸಮೀಕ್ಷೆ ನಡೆಸಲಾಗುವುದು: ಅಶೋಕ್ ಗೆಹ್ಲೋಟ್ 

Ramyashree GN

ಜೈಪುರ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ, ಬಿಹಾರದಲ್ಲಿ ನಡೆದ ಜಾತಿ ಸಮೀಕ್ಷೆಯ ಮಾದರಿಯಲ್ಲಿಯೇ ರಾಜ್ಯದಲ್ಲಿಯೂ ಜಾತಿ ಸಮೀಕ್ಷೆಯನ್ನು ನಡೆಸಲಾಗುವುದು ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಘೋಷಿಸಿದರು.

ಇಲ್ಲಿನ ಪಕ್ಷದ ವಾರ್ ರೂಂನಲ್ಲಿ ಶುಕ್ರವಾರ ನಡೆದ ರಾಜಸ್ಥಾನ ಪ್ರದೇಶ ಕಾಂಗ್ರೆಸ್ ಸಮಿತಿಯ (ಆರ್‌ಪಿಸಿಸಿ) ಕೋರ್ ಕಮಿಟಿ ಸಭೆಯಲ್ಲಿ ಈ ವಿಷಯದ ಕುರಿತು ಚರ್ಚಿಸಲಾಯಿತು.

ಗೆಹ್ಲೋಟ್ ಅವರಲ್ಲದೆ, ರಾಜಸ್ಥಾನದ ಕಾಂಗ್ರೆಸ್ ಉಸ್ತುವಾರಿ ಸುಖಜಿಂದರ್ ರಾಂಧವ, ಆರ್‌ಪಿಸಿಸಿ ಅಧ್ಯಕ್ಷ ಗೋವಿಂದ್ ಸಿಂಗ್ ದೋತಸ್ರ ಮತ್ತು ಇತರ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು.

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಗೆಹ್ಲೋಟ್, 'ಬಿಹಾರದಲ್ಲಿ ನಡೆದಂತೆ ರಾಜಸ್ಥಾನ ಸರ್ಕಾರವೂ ಜಾತಿ ಸಮೀಕ್ಷೆ ನಡೆಸಲಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಜಾತಿ ಸಮೀಕ್ಷೆ ಮತ್ತು ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ ನೀಡುವ ಪರಿಕಲ್ಪನೆಯನ್ನು ರಾಜ್ಯದಲ್ಲಿ ಮುಂದುವರಿಸಲಾಗುವುದು ಎಂದು ಹೇಳಿದರು.

ಆದ್ದರಿಂದ, ಪಕ್ಷದ ಆದೇಶವನ್ನು ಗಮನದಲ್ಲಿಟ್ಟುಕೊಂಡು ರಾಜಸ್ಥಾನ ಸರ್ಕಾರ ಈ ಅಭಿಯಾನವನ್ನು ಘೋಷಿಸಬೇಕು ಎಂದು ನಾವು ನಿರ್ಧರಿಸಿದ್ದೇವೆ ಎಂದು ಅವರು ಹೇಳಿದರು.

'ದೇಶದೊಳಗೆ ನಾನಾ ಜಾತಿಗಳಿವೆ. ನಾನಾ ಧರ್ಮದ ಜನರು ಇಲ್ಲಿ ನೆಲೆಸಿದ್ದಾರೆ. ನಾನಾ ಜಾತಿಯವರು ಬೇರೆ ಬೇರೆ ಕೆಲಸ ಮಾಡುತ್ತಾರೆ. ಯಾವ ಜಾತಿಯ ಜನಸಂಖ್ಯೆ ಎಷ್ಟಿದೆ ಎಂದು ತಿಳಿದುಕೊಂಡರೆ, ಅವರಿಗಾಗಿ ಏನೆಲ್ಲಾ ಯೋಜನೆ ರೂಪಿಸಬೇಕು. ಜಾತಿವಾರು ಯೋಜನೆಗಳನ್ನು ಸಿದ್ಧಪಡಿಸುವುದು ನಮಗೆ ಸುಲಭವಾಗುತ್ತದೆ' ಎಂದು ಅವರು ಹೇಳಿದರು.

ಸಭೆಯಲ್ಲಿ ಜಾತಿ ಆಧಾರಿತ ಸಮೀಕ್ಷೆಯ ಹೊರತಾಗಿ ಪೂರ್ವ ರಾಜಸ್ಥಾನ ಕಾಲುವೆ ಯೋಜನೆ (ಇಆರ್‌ಸಿಪಿ) ವಿಷಯದ ಕುರಿತು ಚರ್ಚೆಗಳು ನಡೆದವು ಎಂದು ರಾಂಧವ ಹೇಳಿದರು.

2023ರ ರಾಜಸ್ಥಾನ ವಿಧಾನಸಭೆ ಚುನಾವಣೆಯು ಈ ವರ್ಷದ ಡಿಸೆಂಬರ್‌ನಲ್ಲಿ ಅಥವಾ ಅದಕ್ಕೂ ಮೊದಲು ನಡೆಯುವ ನಿರೀಕ್ಷೆಯಿದೆ.

SCROLL FOR NEXT