ದೇಶ

ಜಾತಿ ಗಣತಿ ವಿಚಾರದಲ್ಲಿ ಇತರರು ಬಿಹಾರದ ನಡೆಯನ್ನು ಅನುಸರಿಸಬೇಕು: ತೇಜಸ್ವಿ ಯಾದವ್

Ramyashree GN

ಪಾಟ್ನಾ: ದೇಶದಾದ್ಯಂತ ಬಿಹಾರ ಮಾದರಿಯಲ್ಲಿ ಜಾತಿ ಗಣತಿ ನಡೆಸುವಂತೆ ಕೇಂದ್ರದ ಮೇಲೆ ಒತ್ತಡ ಹೇರಿರುವ ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಪ್ರಸಾದ್ ಯಾದವ್, ಜನಸಂಖ್ಯೆಯಲ್ಲಿನ ನಿಜವಾದ ಪ್ರಾತಿನಿಧ್ಯ ತಿಳಿದಾಗ ಮಾತ್ರ ಸಮಾಜದ ಎಲ್ಲಾ ವರ್ಗಗಳಿಗೆ ನೆರವಾಗುವ ನೀತಿಗಳನ್ನು ರೂಪಿಸಲು ಸಾಧ್ಯ ಎಂದು ಹೇಳಿದ್ದಾರೆ.

'ಬಿಹಾರ ಸರ್ಕಾರವು ಮಾನವೀಯ ಕಾರ್ಯವನ್ನು ಕೈಗೊಂಡು ಜಾತಿ ಗಣತಿಯನ್ನು ನಡೆಸಿತು. ಇತರ ರಾಜ್ಯಗಳೂ ಇದನ್ನು ಮಾಡಬೇಕು' ಎಂದು ತೇಜಸ್ವಿ ಹೇಳಿದರು.

ಅಕ್ಟೋಬರ್ 2ರಂದು ಬಿಹಾರ ಸರ್ಕಾರವು ಜಾತಿ ಗಣತಿಯ ವರದಿಗಳನ್ನು ಬಿಡುಗಡೆ ಮಾಡಿತು. ಬಿಹಾರದ ಒಟ್ಟು ಜನಸಂಖ್ಯೆಯ ಶೇ 84 ರಷ್ಟು ಹಿಂದುಳಿದ ಜಾತಿಗಳು (ಇಬಿಸಿ), ಇತರ ಹಿಂದುಳಿದ ಜಾತಿಗಳು (ಒಬಿಸಿಗಳು) ಮತ್ತು ಪರಿಶಿಷ್ಟ ಜಾತಿಗಳನ್ನು (ಎಸ್‌ಸಿ) ಒಳಗೊಂಡಿದೆ ಎಂದು ತಿಳಿಸಿದೆ. ಈ ವರದಿಯು ಸ್ವಾತಂತ್ರ್ಯಾ ನಂತರ ಬಿಡುಗಡೆಯಾದ ಮೊದಲನೇ ಜಾತಿ ಸಮೀಕ್ಷೆಯ ವರದಿಯಾಗಿದೆ.

ಕಾಂಗ್ರೆಸ್‌ನ ಅಶೋಕ್ ಗೆಹ್ಲೋಟ್ ನೇತೃತ್ವದ ರಾಜಸ್ಥಾನ ಸರ್ಕಾರವು ಮತ್ತೆ ಅಧಿಕಾರಕ್ಕೆ ಬಂದರೆ ಬಿಹಾರದ ಮಾದರಿಯಲ್ಲಿಯೇ ಜಾತಿ ಸಮೀಕ್ಷೆಯನ್ನು ಘೋಷಿಸಿದೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು, ಛತ್ತೀಸ್‌ಗಢದಲ್ಲೂ ಜಾತಿ ಗಣತಿ ನಡೆಸುವುದಾಗಿ ಭರವಸೆ ನೀಡಿದ್ದಾರೆ.

ಇತ್ತೀಚೆಗಷ್ಟೇ ಕರ್ನಾಟಕದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಕಾಂಗ್ರೆಸ್‌ ಅದರ ಬಗ್ಗೆ ಚಿಂತನೆ ನಡೆಸಿದೆ.

ಜಾತಿ ಆಧಾರಿತ ಸಮೀಕ್ಷೆಯನ್ನು ಟೀಕಿಸುವ ಮತ್ತು ದತ್ತಾಂಶದ ಸತ್ಯಾಸತ್ಯತೆಯನ್ನು ಪ್ರಶ್ನಿಸಿದ್ದಕ್ಕಾಗಿ ವಿರೋಧ ಪಕ್ಷ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ತೇಜಸ್ವಿ, 'ಸಮೀಕ್ಷೆ ಅಥವಾ ಡೇಟಾದ ಬಗ್ಗೆ ಬಿಜೆಪಿಯವರು ಪ್ರಶ್ನೆಗಳನ್ನು ಹೊಂದಿದ್ದರೆ, ರಾಷ್ಟ್ರಮಟ್ಟದಲ್ಲಿ ಸಮೀಕ್ಷೆ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಅವರು ಏಕೆ ಕೇಳಬಾರದು? ಎಂದಿದ್ದಾರೆ.

'ಪ್ರಾದೇಶಿಕ ಪಕ್ಷಗಳು ಶೀಘ್ರದಲ್ಲೇ ಕೊನೆಗೊಳ್ಳುತ್ತವೆ' ಎಂದಿರುವ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಕುರಿತು ಮಾತನಾಡಿದ ತೇಜಸ್ವಿ, 'ಮೋದಿ ಮತ್ತು ನಡ್ಡಾ ಇಬ್ಬರೂ ಹೊರಗಿನವರು. ನಮಗಿಂತ ಬಿಹಾರದ ಬಗ್ಗೆ ಹೆಚ್ಚು ತಿಳಿದಿದ್ದಾರೆಯೇ? ಪ್ರಾದೇಶಿಕ ಪಕ್ಷಗಳು ನಾಶವಾದಾಗ ಕೇಂದ್ರ ಹೇಗೆ ಉಳಿಯುತ್ತದೆ? ಎಂದು ಪ್ರಶ್ನಿಸಿದರು.

SCROLL FOR NEXT