ದೇಶ

ಟೋಲ್ ಪ್ಲಾಜಾಗಳಿಗೆ ಹೊಸ ಎಸ್ಒಪಿ; ವ್ಯವಸ್ಥಾಪಕರು ಕಡ್ಡಾಯವಾಗಿ ಬಾಡಿ ಕ್ಯಾಮೆರಾ ಧರಿಸಬೇಕು

Lingaraj Badiger

ನವದೆಹಲಿ: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್ಎಚ್ಎಐ) ಪ್ರಮಾಣೀಕೃತ ಕಾರ್ಯನಿರ್ವಹಣಾ ನಿಯಮಾವಳಿಗಳನ್ನು ಬಿಡುಗಡೆ ಮಾಡಿದ್ದು, ಅದರ ಅನ್ವಯ ಟೋಲ್ ಪ್ಲಾಜಾಗಳ ವ್ಯವಸ್ಥಾಪಕರು ಮತ್ತು ಮೇಲ್ವಿಚಾರಕರು ಕಡ್ಡಾಯವಾಗಿ ಬಾಡಿ ಕ್ಯಾಮೆರಾ ಧರಿಸಬೇಕು ಎಂದು ಹೇಳಿದೆ.

ವ್ಯವಸ್ಥಾಪಕರು ಮತ್ತು ಮೇಲ್ವಿಚಾರಕರು ಅಶಿಸ್ತಿನಿಂದ ವರ್ತಿಸುವ ಪ್ರಯಾಣಿಕರೊಂದಿಗೆ ವ್ಯವಹರಿಸುವಾಗ ಬಾಡಿ ಕ್ಯಾಮೆರಾ ಧರಿಸಬೇಕು. ಇದರಿಂದಾಗಿ ಘಟನೆಗಳನ್ನು ರೆಕಾರ್ಡ್ ಮಾಡಬಹುದು ಎಂದು ಎನ್ಎಚ್ಎಐ ಪ್ರಕಟಣೆಯಲ್ಲಿ ತಿಳಿಸಿದೆ.

ವಾಹನ ಸವಾರರು ಮತ್ತು ಟೋಲ್ ಆಪರೇಟರ್‌ಗಳನ್ನು ರಕ್ಷಿಸಲು, ವಾಗ್ವಾದಗಳ ಘಟನೆಗಳನ್ನು ಕಡಿಮೆ ಮಾಡಲು ಮತ್ತು ಟೋಲ್ ಪ್ಲಾಜಾಗಳಲ್ಲಿ ಭದ್ರತೆಯನ್ನು ಹೆಚ್ಚಿಸಲು ಪ್ರಮಾಣೀಕೃತ ಕಾರ್ಯನಿರ್ವಹಣಾ ನಿಯಮಾವಳಿಗಳನ್ನು ಬಿಡುಗಡೆ ಮಾಡಿದೆ ಎಂದು ಎನ್ಎಚ್ಎಐ ಹೇಳಿದೆ.

ಯಾವುದೇ ಬಗೆಯ ನಿರೀಕ್ಷಿತ ಹಿಂಸಾಚಾರದ ಘಟನೆಗಳು ಹಾಗೂ ಟೋಲ್ ಪ್ಲಾಝಾಗಳ ಬಳಿ ನಡೆಯುವ ಹಿಂಸಾಚಾರದ ಘಟನೆಗಳನ್ನು ಬಾಡಿ ಕ್ಯಾಮೆರಾ ಧರಿಸಿರುವ ಟೋಲ್ ಪ್ಲಾಝಾ ವ್ಯವಸ್ಥಾಪಕರು/ಪಥಗಳ ಮೇಲ್ವಿಚಾರಕರು ಮಾತ್ರ ನಿರ್ವಹಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಯಾವುದೇ ಸಂದರ್ಭಗಳಲ್ಲೂ ಟೋಲ್ ಪ್ಲಾಝಾ ಸಿಬ್ಬಂದಿ ಪ್ರಚೋದನಾಕಾರಿ ಭಾಷೆ ಬಳಸಬಾರದು ಅಥವಾ ಹಿಂಸಾಚಾರಕ್ಕೆ ಮುಂದಾಗಬಾರದು. ಒಂದು ವೇಳೆ ಸಮಸ್ಯೆಯೇನಾದರೂ ಮುಂದುವರಿದರೆ ಅಥವಾ ವಿಷಮಿಸಿದರೆ ಟೋಲ್ ಫ್ಲಾಝಾ ಅಧಿಕಾರಿಗಳು ಸ್ಥಳೀಯ ಪೊಲೀಸರ ನೆರವು ಪಡೆದು ಎಫ್‌ ಐ ಆರ್ ದಾಖಲಿಸಬೇಕು. ಅಂತಹ ಘಟನೆಗಳ ಸಾಕ್ಷಿಯನ್ನು ಒದಗಿಸಲು ಪ್ಲಾಝಾ ಸಿಬ್ಬಂದಿಗಳು ವಿಡಿಯೊ ಚಿತ್ರೀಕರಣ ಮಾಡಬಹುದಾಗಿದೆ” ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

SCROLL FOR NEXT