ದೇಶ

'ಜಾತಿಭೇದ' ಮತ್ತು 'ಲಿಂಗ ತಾರತಮ್ಯ'ವನ್ನು ವಿರೋಧಿಸಿ ಪುದುಚೇರಿಯ ಏಕೈಕ ಮಹಿಳಾ ಸಚಿವೆ ರಾಜೀನಾಮೆ

Vishwanath S

ಪುದುಚೇರಿ: ಪಿತೂರಿ, ಹಣಬಲದ ರಾಜಕೀಯದ ಜೊತೆಗೆ ಜಾತಿಭೇದ ಮತ್ತು ಲಿಂಗ ತಾರತಮ್ಯವನ್ನು ಎದುರಿಸುತ್ತಿರುವುದಾಗಿ ಆರೋಪಿಸಿ ಪುದುಚೇರಿಯ ಏಕೈಕ ಮಹಿಳಾ ಶಾಸಕಿ ಮತ್ತು ಸಚಿವೆ ಎಸ್.ಚಂದಿರಾ ಪ್ರಿಯಾಂಕ ಅವರು ಎಐಎನ್‌ಆರ್‌ಸಿ-ಬಿಜೆಪಿ ಸಮ್ಮಿಶ್ರ ಸಂಪುಟಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

2021ರಲ್ಲಿ ನೆಡುಂಗಾಡು ಶಾಸಕಿ ಚಂದಿರಾ ಪ್ರಿಯಾಂಕ 40 ವರ್ಷಗಳ ನಂತರ ಕೇಂದ್ರಾಡಳಿತ ಪ್ರದೇಶದಲ್ಲಿ ಮಂತ್ರಿಯಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಎನ್ ರಣಗಸಾಮಿ ನೇತೃತ್ವದ ಸಮ್ಮಿಶ್ರ ಸಂಪುಟದಲ್ಲಿ ಅವರಿಗೆ ಸಾರಿಗೆ ಖಾತೆಯನ್ನು ಹಸ್ತಾಂತರಿಸಲಾಯಿತು.

2021ರ ವಿಧಾನಸಭಾ ಚುನಾವಣೆಯಲ್ಲಿ ಎಐಎನ್‌ಆರ್‌ಸಿ ಟಿಕೆಟ್‌ನಲ್ಲಿ ಕಾರೈಕಲ್‌ನ ನೆಡುಂಗಾಡು ಮೀಸಲು ಕ್ಷೇತ್ರದಿಂದ ಚಂದಿರ ಪ್ರಿಯಂಕ ಗೆಲುವು ಸಾಧಿಸಿದ್ದರು. ಇಂದು ಚಂದಿರ ಪ್ರಿಯಾಂಕ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ತಮ್ಮ ಕಾರ್ಯದರ್ಶಿ ಮೂಲಕ ಮುಖ್ಯಮಂತ್ರಿ ಕಚೇರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿದರು. ಪತ್ರದ ಸ್ವೀಕೃತಿಯನ್ನು ಸಿಎಂಒ ಮೂಲಗಳು ಖಚಿತಪಡಿಸಿದ್ದು, ಈ ಕುರಿತು ನಿರ್ಧಾರ ಕೈಗೊಳ್ಳಲು ಮುಖ್ಯಮಂತ್ರಿಗೆ ರವಾನಿಸಲಾಗಿದೆ ಎಂದು ತಿಳಿಸಿದ್ದಾರೆ.

ಪಿತೂರಿಯ ರಾಜಕೀಯವನ್ನು ಜಯಿಸುವುದು ಅಷ್ಟು ಸುಲಭವಲ್ಲ. ಹಣಬಲದ ದೊಡ್ಡ ಭೂತದ ವಿರುದ್ಧ ನಾನು ಹೋರಾಡಲು ಸಾಧ್ಯವಿಲ್ಲ ಎಂದು ಅರಿತುಕೊಂಡಿದ್ದೇನೆ. ಹೀಗಾಗಿ ರಾಜಿನಾಮೆ ನೀಡುತ್ತಿದ್ದೇನೆ ಎಂದು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಸಚಿವೆಯಾಗಿ ನಾನು ನೋಡಿಕೊಳ್ಳುತ್ತಿರುವ ಇಲಾಖೆಗಳಲ್ಲಿ ಯಾವ ಬದಲಾವಣೆಗಳು, ಸುಧಾರಣೆಗಳನ್ನು ಮಾಡಿದ್ದೇನೆ ಎಂಬುದನ್ನು ಎತ್ತಿ ತೋರಿಸಲು ವಿವರವಾದ ವರದಿಯೊಂದಿಗೆ ಶೀಘ್ರದಲ್ಲೇ ಹೊರಬರುವುದಾಗಿ ಚಂದಿರ ಪ್ರಿಯಂಕ ಹೇಳಿದರು.

SCROLL FOR NEXT